
ಯಾದಗಿರಿ: ಸರ್ಕಾರದ ಬರ ಘೋಷಣೆ ವಿಚಾರದಲ್ಲಿ ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಮುಂದಿನ ೮-೧೦ ದಿನಗಳಲ್ಲಿ ಈಗಾಗಲೇ ಕೈಬಿಡಲಾಗಿರುವ ಇನ್ನುಳಿದ ತಾಲೂಕುಗಳನ್ನು ಬರ ಪಟ್ಟಿಗೆ ಸೇರ್ಪಡೆಗೊಳಿಸುವ ಭರವಸೆಯನ್ನು ಕಂದಾಯ ಸಚಿವ ಜಿ. ಪರಮೇಶ್ವರ ಅವರು ನೀಡಿದ್ದಾರೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೆ. ೪ರಂದು ಕಂದಾಯ ಸಚಿವ ಜಿ. ಪರಮೇಶ್ವರ ಅವರನ್ನು ತುಮಕೂರಿನಲ್ಲಿ ಖುದ್ದಾಗಿ ಭೇಟಿ ಮಾಡಿ ಯಾದಗಿರಿ ಮತ್ತು ವಡಗೇರಾ ತಾಲೂಕುಗಳ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ಜಿಲ್ಲಾಡಳಿತವೂ ಬರ ಘೋಷಣೆಗೆ ಪೂರಕವಾದ ವರದಿ ನೀಡಿದೆ. ಹೀಗಾಗಿ ಯಾವುದೇ ಅಡ್ಡಿ ಅಥವಾ ಆತಂಕವಿಲ್ಲ. ಮುಂದಿನ ದಿನಗಳಲ್ಲಿ ಇನ್ನುಳಿದ ತಾಲೂಕುಗಳೂ ಬರಪೀಡಿತ ಎಂದು ಘೋಷಣೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಆವರಿಸಿದ್ದು, ಸದ್ಯ ಒಂದು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಜಿಲ್ಲೆಯ ಇನ್ನುಳಿದ ತಾಲೂಕುಗಳ ಪರಿಸ್ಥಿತಿಯೂ ಗಂಭೀರವಾಗಿದೆ. ಈ ಕುರಿತು ಕಂದಾಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಚಿವರು ಸ್ಥಳದಿಂದಲೇ ಮೊಬೈಲ್ ಮೂಲಕ ಸಂಬAಧಿಸಿದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಜಿಲ್ಲೆಯ ವಾಸ್ತವ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಇನ್ನುಳಿದ ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸುವ ವಿಶ್ವಾಸವಿದೆ ಎಂದು ತುನ್ನೂರ ತಿಳಿಸಿದ್ದಾರೆ.
ರೈತರ ನೋವು ನಿವಾರಣೆಗೆ ಸರ್ಕಾರ ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜಿಲ್ಲೆಯ ಬರದ ನೈಜ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಮಳೆ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ ಎಂಬುದನ್ನೂ ಸಚಿವರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಬರದ ವಿಷಯದಲ್ಲೂ ರಾಜಕೀಯ ಮಾಡುವ ಪ್ರತಿಪಕ್ಷದವರ ಟೀಕೆಗಳಿಗೆ ಯಾರೂ ಕಿವಿಗೊಡಬಾರದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರೈತರ ಪರವಾಗಿದೆ. ರೈತರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ. ಮುಖ್ಯಮಂತ್ರಿ ಅವರು ಕೂಡ ಕೆಲವು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಶೀಘ್ರದಲ್ಲೇ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಶಾಸಕ ತುನ್ನೂರ ತಿಳಿಸಿದ್ದಾರೆ.
ರಾಜ್ಯದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬರ ಸೇರಿದಂತೆ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಕಳೆದ ಅಧಿವೇಶನದಲ್ಲಿ ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಸೆ.೨೧, ೨೨ ಮತ್ತು ೨೩ರಂದು ವಿಶೇಷ ಅಧಿವೇಶನ ಕರೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಶಾಸಕ ತುನ್ನೂರ ಹೇಳಿದ್ದಾರೆ.
ವೈರಲ್ ಇನ್ಫೆಕ್ಷನ್ ಕಾರಣದಿಂದ ಇತ್ತೀಚೆಗೆ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಂಡಿಲ್ಲ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಸ್ಪಷ್ಟಪಡಿಸಿದ್ದಾರೆ. ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿರುವ ನಮ್ಮ ಸರ್ಕಾರ ಇದೀಗ ನೂತನ ಪ್ರಜಾಸೇವಾ ಇಲಾಖೆಯನ್ನು ಪ್ರಾರಂಭಿಸಿದೆ. ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳು ನಡೆಯಲಿವೆ.
ಈ ಸಭೆಗಳಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅರ್ಹ ಅರ್ಜಿಗಳಿಗೆ ಪರಿಹಾರ ಒದಗಿಸುವ ಮೂಲಕ ಜನಸೇವೆಯ ಹೊಸ ಅಧ್ಯಾಯ ಆರಂಭಿಸಲಾಗುತ್ತಿದೆ. ಇದಕ್ಕೆ ಜನರ ಸಹಕಾರ ಅತ್ಯಗತ್ಯ ಎಂದು ಶಾಸಕ ತುನ್ನೂರ ತಿಳಿಸಿದ್ದಾರೆ.





























