
ಕಲಬುರಗಿ,ಜೂ.24: ಯೋಗ ಶಿಕ್ಷಕರ ಮುಖಾಂತರ ಕಲಿತು ನಿಯಮಿತವಾಗಿ ದಿನಾಲು ಯೋಗ, ಧ್ಯಾನ ಮಾಡಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಿ ದಿನ ನಿತ್ಯದ ಕೆಲಸ ಕಾರ್ಯ ಮಾಡಲು ಉಲ್ಲಾಸ, ಉತ್ಸಾಹ ಮೂಡುತ್ತದೆ, ಅದರಲ್ಲೂ ಯುವ ವಿದ್ಯಾರ್ಥಿಗಳಿಗೆ ಓದಿನ ಒತ್ತಡವನ್ನು ನಿಭಾಯಿಸುವ ಶಕ್ತಿ ಬರುತ್ತದೆ ಎಂದು ಸರ್ವಜ್ಞ ಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆಯನ್ನು ಉದ್ಘಾಟಿಸಿ ಸಂಗೀತಾ ಅಭಿಷೇಕ್ ಪಾಟೀಲರು ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ತಂದೆ ತಾಯಂದಿರ ಸಣ್ಣ ಪುಟ್ಟ ಮಾತುಗಳಿಗೂ ಮಕ್ಕಳು ಮನಸ್ಸಿಗೆ ಬೇಜಾರು ಮಾಡಿಕೊಂಡು ವಿಕೋಪಕ್ಕೆ ಹೋಗುವ ಪ್ರಸಂಗಗಳು ಕಾಣುತ್ತೇವೆ, ಈವಕ್ಕೆಲ್ಲ ಯೋಗ, ಧ್ಯಾನ, ಲಿಂಗಪೂಜೆಯಂಥವುಗಳು ಮನಸ್ಸಿಗೆ ಮುದ ನೀಡಿ ಏಕಾಗ್ರತೆ ಉಂಟುಮಾಡುತ್ತವೆ ಎಂದರು. ಮಧುರ ಸಂಗೀತವೂ ಕೂಡ ಕುಗ್ಗಿದ ಮನಸ್ಸನ್ನು ಅರಳಿಸಿ ಜೀವನೋತ್ಸಾಹವನ್ನು ಇಮ್ಮಡಿ ಗೊಳಿಸುತ್ತದೆ ಎಂದರು.
21 ಜೂನ್ 2014 ರಿಂದ ಹನ್ನೆರಡು ವರ್ಷದಲ್ಲಿ ಪ್ರಪಂಚದಲ್ಲಿಯೇ ಭಾರತೀಯ ಯೋಗದ ಮಹತ್ವವನ್ನು ಸಾರಿ ದೇಶ ವಿದೇಶಗಳಲ್ಲಿ ಯೋಗಪದ್ದತಿ, ಆಹಾರಪದ್ದತಿ, ಸಂಗೀತ – ಸಂಪ್ರದಾಯಗಳನ್ನು ಮರು ಪ್ರತಿಷ್ಠಾಪಿಸುತ್ತಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿ ಭಾರತೀಯರೆಲ್ಲಾ ಪಾಲಿಸುವಂತೆ ಪ್ರೇರೇಪಿಸಿದ್ದು, ಈಗ ಜಗತ್ತೇ ಯೋಗ ಕಾರ್ಯಕ್ರಮವನ್ನು ಅನುಸರಿಸುತ್ತಿದೆ.
ಯುವ ವಿದ್ಯಾರ್ಥಿಗಳ ಆಧುನಿಕ ಜೀವನ ಶೈಲಿ ಹಾಗೂ ಅತಿಯಾದ ಕರಿದ, ಜಂಕ್ ಫುಡ್‍ದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಭ್ಯಾಸದಲ್ಲಿ ಕೂಡ ಕುಂಟಿತಗೊಳ್ಳತ್ತಲಿದ್ದಾರೆ. ಆದ್ದರಿಂದ ಯೋಗದ ಜೊತೆ ಉತ್ತಮ ಆಹಾರ ಪದ್ದತಿ, ಆಟೋಟಗಳಿಂದ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಂದ ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಬಹುದು ಎಂದು ತಿಳಿಸಿದರು ಮತ್ತು ದಿನಾಲು ಯೋಗ ಹಾಗೂ ಸಂಗೀತವನ್ನು ಸರ್ವಜ್ಞ ಶಾಲೆಯಲ್ಲಿ ಕಲಿಸಲಾಗುತ್ತಿದೆ ಎಂದರು.ಸರ್ವಜ್ಞ ಶಾಲೆಯ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅನಿತಾ ಕುಲಕರ್ಣಿ, ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.




















