
ಜಮಖಂಡಿ:ಜೂ.1:ಐಪಿಎಲ್-2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ತಂಡ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು.
ನಗರದ ತಾಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ಆರ್‍ಸಿಬಿ ಹಾಗೂ ಗುಜರಾತ್ ಟೈಟನ್ಸ್ (ಜಿಟಿ) ನಡುವಿನ ಫೈನಲ್ ಪಂದ್ಯವನ್ನು ಸಾರ್ವಜನಿಕರು ವೀಕ್ಷಿಸಲು ಆರ್‍ಸಿಬಿ ಅಭಿಮಾನಿಗಳ ವತಿಯಿಂದ ಎಲ್‍ಇಡಿ ಬಿಗ್ ಸ್ಕ್ರೀನ್ ಅಳವಡಿಸಲಾಗಿತ್ತು. ಪಂದ್ಯ ಆರಂಭಕ್ಕೂ ಮುನ್ನ ರುದ್ರಾವಧೂತ ಮಠದ ಶ್ರೀ ಕೃಷ್ಣಾನಂದ ಅವಧೂತರು, ಬಸವರಾಜ ನ್ಯಾಮಗೌಡ ಹಾಗೂ ವಿರುಪಾಕ್ಷ ಗುಡುಗುಂಟಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಂದ್ಯ ವೀಕ್ಷಣೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಸೇರಿದ್ದು, ಓಲೆಮಠದ ಶ್ರೀ ಆನಂದ ದೇವರು ಸಾರ್ವಜನಿಕರೊಂದಿಗೆ ಕುಳಿತು ಪಂದ್ಯ ವೀಕ್ಷಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಪಂದ್ಯದುದ್ದಕ್ಕೂ ಅಭಿಮಾನಿಗಳು ಆರ್‍ಸಿಬಿ ಪರ ಜಯಘೋಷಗಳನ್ನು ಮೊಳಗಿಸಿ ಸಂಭ್ರಮಿಸಿದರು.
ಫೈನಲ್ ಪಂದ್ಯದಲ್ಲಿ ಆರ್‍ಸಿಬಿ ತಂಡ ವಿಜಯಶಾಲಿಯಾಗುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ, ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿದ ಅಭಿಮಾನಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಭರ್ಜರಿ ಬೈಕ್ ರ್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.
ಜಮಖಂಡಿ ನಗರದಲ್ಲಿ ರಾತ್ರಿ ತಡವರೆಗೂ ಆರ್‍ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ ಮುಂದುವರಿದಿದ್ದು, ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.


























