
ಬೀದರ್,ಮೇ.15-ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬರ್ಜರಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಅಪರೂಪದ ಹಾವನ್ನ ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ನೋಂದಣಿ ಹೊಂದಿದ್ದ ಬಿಳಿ ಬಣ್ಣದ ಕಾರಿನಲ್ಲಿ ರೆಡ್ ಸ್ಯಾಂಡ್ ಬೋವಾ ಜೀವಂತ ಹಾವನ್ನ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ದಾಳಿ ವೇಳೆ ಸುಮಾರು 5.34 ಕೆ.ಜಿ ತೂಕದ ಜೀವಂತ ಸ್ಯಾಂಡ್ ಬೋವಾ ಹಾವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಹಾವು ಸಾಗಿಸುತ್ತಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರಡಿ ಪ್ರಕರಣ ದಾಖಲಾಗಿದೆ.
ಬೀದರ್ ಜಿಲ್ಲಾ ಅರಣ್ಯಾಧಿಕಾರಿ ಆಶಿಶ್ ರೆಡ್ಡಿ ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.























