
ಜೇವರಗಿ,ಮೇ 15: ಪಟ್ಟಣದಲ್ಲಿ ಮೇ 17 ರಂದು ಹಮ್ಮಿಕೊಳ್ಳಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಿಸಲು ಸರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕರು ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು.
ಜೇವರ್ಗಿ ಪಟ್ಟಣದ ವಿವಿಧೆಡೆ ಜಯಂತ್ಯೋತ್ಸವದ ಅಂಗವಾಗಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ಖುದ್ದಾಗಿ ವೀಕ್ಷಿಸಿ, ಕಾರ್ಯಕ್ರಮದ ತಯಾರಿಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.
ಬಾಬಾಸಾಹೇಬರ ವಿಚಾರಧಾರೆಗಳು ಇಡೀ ಮನುಕುಲಕ್ಕೆ ದಾರಿದೀಪವಾಗಿವೆ. ಅವರ ಜನ್ಮದಿನವನ್ನು ಕೇವಲ ಆಚರಣೆಯಾಗಿ ಮಾಡದೆ, ಸಮಾಜದಲ್ಲಿ ಅರಿವು ಮತ್ತು ಸಾಮರಸ್ಯ ಮೂಡಿಸುವ ಹಬ್ಬವಾಗಿ ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಮತ್ತು ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುವಂತೆ ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು. ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಶಾಸಕರು, ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಜಯಂತ್ಯೋತ್ಸವ ಸಮಿತಿಯ ಗೌರವಾನ್ವಿತ ಪದಾಧಿಕಾರಿಗಳು, ಸದಸ್ಯರು, ದಲಿತ ಸಂಘಟನೆಗಳ ಪ್ರಮುಖರು ಹಾಗೂ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.























