Home ಜಿಲ್ಲೆ ಬೆಂಗಳೂರು ಸಾಂಪ್ರದಾಯಿಕ ಕಲೆಗೆ ರಂಗೋಲಿ ಅತ್ಯುತ್ತಮ ಮಾಧ್ಯಮ

ಸಾಂಪ್ರದಾಯಿಕ ಕಲೆಗೆ ರಂಗೋಲಿ ಅತ್ಯುತ್ತಮ ಮಾಧ್ಯಮ

ಕೆಂಗೇರಿ, ಜೂ. ೨೪: ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆ, ಸೃಜನಶೀಲತೆ ಹಾಗೂ ಆಲೋಚನೆಗಳ ಅಭಿವ್ಯಕ್ತಿಗೆ ಸಾಂಪ್ರದಾಯಿಕ ಕಲೆ, ರಂಗೋಲಿ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ


ಕ್ಷೇತ್ರದ ಉಲ್ಲಾಳು, ಕೆಂಗಲ್ ಹನುಮಂತಯ್ಯ, ನಾಗದೇವನಹಳ್ಳಿ ಹಾಗೂ ಶಿವನಪಾಳ್ಯ ವಾರ್ಡುಗಳ ಕಾಂಗ್ರೆಸ್ ಸಮಿತಿ ವತಿಯಿಂದ ಕೊಮ್ಮಘಟ್ಟದ ಮೈದಾನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ರಂಗೋಲಿ ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಮಾತನಾಡಿದರು


ನೆಲಮೂಲ ಸಂಸ್ಕೃತಿಯ ಪ್ರತೀಕ ರಂಗೋಲಿ ಬಿಡಿಸುವುದನ್ನು ನಾಡಿನ ಮಹಿಳೆಯರು ಕರಗತ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ, ಕುಡಿತದಿಂದ ಕುಟುಂಬ, ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳು, ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ, ಶಿಕ್ಷಣ ವಂಚಿತ ಬಾಲಕಾರ್ಮಿಕರ ಬವಣೆ, ಸಂವಿಧಾನದ ಆಶಯ, ನೆಲದ ಕಾನೂನಿನ ಅರಿವು, ಶಿಕ್ಷೆ, ಸಹಿತ ನೂರಾರು ವಿಚಾರ, ವಿಷಯಗಳನ್ನು ರಂಗೋಲಿ ಮೂಲಕ ಪರಿಣಾಮಕಾರಿಯಾಗಿ ಚಿತ್ರಿಸಿ “ಮಹಿಳಾ ದಿನಾಚರಣೆ ” ಕಳೆಗಟ್ಟುವಂತೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು


ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ರಂಜಾನ್ ಸಹಿತ ಹಲವು ಹಬ್ಬ ಹರಿದಿನ, ನಾಡಿನ ಕಲೆ, ಕ್ರೀಡೆ ಸಾಂಸ್ಕೃತಿಕ, ಮಹತ್ವ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳನ್ನು ಕ್ಷೇತ್ರದ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಮಹಿಳೆಯರ ಮುಂದಾಳತ್ವದಲ್ಲಿ ವಿಶಿಷ್ಟವಾಗಿ ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತಿದೆ ಎಂದರು


ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಪರಿಣಿತರಿಂದ ಕ್ಷೇತ್ರದಾದ್ಯಂತ ಉಚಿತ ವೃತ್ತಿ ಆಧಾರಿತ ತರಬೇತಿ ಹಾಗೂ ಮಾರ್ಗದರ್ಶನ ಒದಗಿಸಲಾಗುತ್ತಿದೆ.

ಜತೆಗೆ ಸ್ವ ಉದ್ಯೋಗಕ್ಕೂ ಸಹಾಯ ಮಾಡಲಾಗುತ್ತಿದೆ. ಮಹಿಳೆಯರ ಜೀವನೋಪಾಯಕ್ಕೆ ಇದರಿಂದ ಉಪಯೋಗವಾಗುತ್ತಿದೆ. ಮಕ್ಕಳ ಶಿಕ್ಷಣ, ಕೌಟುಂಬಿಕ ನಿರ್ವಹಣೆಗೂ ಸಹಾಯವಾಗುತ್ತಿದೆ
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಮಾರು ೧೭೩೦೦ ಮಹಿಳೆಯರಿಗೆ ಸಮಾಧಾನಕರ ಬಹುಮಾನ, ೪೦೦ ಮಂದಿ ವಿಜೇತರಿಗೆ ನಗದು ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಗ್ರಾಮ ದೇವತೆ ಉತ್ಸವ ಮೂರ್ತಿಗಳನ್ನು ಫಲ ಪುಷ್ಪಗಳೊಂದಿಗೆ ವಿಶಿಷ್ಟವಾಗಿ ಅಲಂಕರಿಸಿ ವೇದಿಕೆ ಸಮೇತ ಪ್ರತಿಷ್ಠಾಪಿಸಿ ಆರಾಧಿಸಲಾಯಿತು. ಸಾವಿರಾರು ಸದ್ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಸಾರ್ವಜನಿಕರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.