Home Lead News ರಾಮಲಿಂಗಾರೆಡ್ಡಿ ರಾಜೀನಾಮೆ

ರಾಮಲಿಂಗಾರೆಡ್ಡಿ ರಾಜೀನಾಮೆ

ಬೆಂಗಳೂರು, ಜೂ. ೪- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ೨೪ ಗಂಟೆ ಕಳೆಯುವ ಮೊದಲೇ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಕಾಂಗ್ರೆಸ್‌ನ ಪ್ರಭಾವಿ ಹಾಗೂ ಹಿರಿಯ ನಾಯಕರಾಗಿರುವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿದ್ದು, ಇದು ರಾಮಲಿಂಗಾರೆಡ್ಡಿ ಅವರಿಗೆ ಅಸಮಾಧಾನ ಮೂಡಿಸಿದೆ. ಹಾಗಾಗಿ ಇಂದು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಸಚಿವ ಸ್ಥಾನದ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.


ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಚನೆ ಸಂದರ್ಭದಲ್ಲಿ ಹೈಕಮಾಂಡ್ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲು ನಿರ್ಧರಿಸಿತ್ತು. ಆದರೆ ಆಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಮಲಿಂಗಾರೆಡ್ಡಿ ಅವರ ಮನವೊಲಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಾನು ಪಡೆಯುತ್ತೇನೆ. ನಾನು ಮುಖ್ಯಮಂತ್ರಿಯಾದ ನಂತರ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೆ ಕೊಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರಿಗೆ ಮಾತು ಕೊಟ್ಟಿದ್ದರು.


ಆದರೆ ಈಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡದೆ ಜಲಸಂಪನ್ಮೂಲ ಖಾತೆ ನೀಡಿರುವುದು ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ಅವರಲ್ಲಿ ಬೇಸರ ಮೂಡಿಸಿದೆ. ನನಗೆ ಸಚಿವ ಸ್ಥಾನವೇ ಬೇಡ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಹೇಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.


ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಿ ಒಂದು ದಿನ ಕಳೆಯುಷ್ಟರಲ್ಲೇ ಅಸಮಾಧಾನಗಳು ಸ್ಪೋಟಿಸಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.


ಕೊಟ್ಟ ಮಾತಿನಂತೆ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ ಇಲ್ಲದಿದ್ದರೆ ಸಚಿವ ಸ್ಥಾನವೇ ಬೇಡ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನಿಸಿ ಅವರ ಮನವೊಳಿಸಲು ಡಿ.ಕೆ. ಶಿವಕುಮಾರ್ ಪಯತ್ನ ನಡೆಸಿದ್ದಾರೆ. ಆದರೆ ಅದಕ್ಕೆ ಒಪ್ಪದ ಸಚಿವ ರಾಮಲಿಂಗಾರೆಡ್ಡಿ, ಅಸಮಾಧಾನ, ಬೇಸರಗೊಂಡಿದ್ದು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ವರಿಷ್ಠರು ಅವರಿಗೆ ಕರೆ ಮಾಡಿ ಅವರ ಮನವೊಲಿಸುವ ಕೆಲಸ ನಡೆಸಿದ್ದಾರೆ.