Home Lead News ಸಚಿವರ ಪಟ್ಟಿಗೆ ಹೈ ಮುದ್ರೆ

ಸಚಿವರ ಪಟ್ಟಿಗೆ ಹೈ ಮುದ್ರೆ

ಬೆಂಗಳೂರು, ಜೂ. ೨- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಳೆ ಸಂಜೆ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ರವರ ಜತೆ ೧೨ ರಿಂದ ೧೪ ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಮಾಣ ವಚನ ಸ್ವೀಕರಿಸಲಿರುವ ಸಚಿವರುಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಇಂದು ಅಂತಿಮಗೊಳಿಸಲಿದೆ.


ಮೊದಲ ಹಂತದಲ್ಲಿ ಬಹುತೇಕ ಹಿರಿಯ ಶಾಸಕರುಗಳೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ೨ನೇ ಹಂತದಲ್ಲಿ ೮ ರಿಂದ ೧೦ ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಲು ಹೈಕಮಾಂಡ್ ನಿರ್ಧರಿಸಿದೆ.


ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಅವರ ದೆಹಲಿ ನಿವಾಸದಲ್ಲಿಂದು ಸಭೆ ನಡೆದಿದ್ದು, ಈ ಸಭೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಇವರುಗಳು ಪಾಲ್ಗೊಂಡು ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಸಿದರು.
ಮೊದಲ ಹಂತದಲ್ಲಿ ೧೨ ರಿಂದ ೧೪ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವರುಗಳ ಪಟ್ಟಿಗೆ ಅಂತಿಮ ರೂಪ ನೀಡಲಾಗಿದ್ದು, ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರ ಜತೆ ಅಂತಿಮವಾಗಿ ಚರ್ಚಿಸಿ ಸಚಿವರ ಪಟ್ಟಿಯನ್ನು ಫೈನಲ್ ಮಾಡಲಾಗುತ್ತದೆ.


ಇಂದಿನ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಮೊದಲ ಹಂತದಲ್ಲಿ ತಮ್ಮ ಕಡೆಯಿಂದ ಯಾರನ್ನು ಸಚಿವರನ್ನಾಗಿಸಬೇಕು ಎಂಬ ಹೆಸರುಗಳನ್ನು ಪ್ರಸ್ತಾಪಿಸಿದ್ದು, ಜತೆಗೆ ಹೈಕಮಾಂಡ್ ಸಹ ಕೆಲವು ಹೆಸರುಗಳನ್ನು ಪ್ರಸ್ತಾಪಿಸಿ ಅಂತಿಮವಾಗಿ ೧೨ ರಿಂದ ೧೪ ಸಚಿವರ ಪಟ್ಟಿಯನ್ನು ತಯಾರಿಸಲಾಗಿದೆ.
ಇದಕ್ಕೆ ರಾಹುಲ್‌ಗಾಂಧಿಯವರ ಅನುಮೋದನೆ ಪಡೆದು ಇಂದು ಸಂಜೆ ಇಲ್ಲವೇ ನಾಳೆ ಬೆಳಿಗ್ಗೆ ಸಚಿವರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.


ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕ ಹಿರಿಯ ಸಚಿವರುಗಳು ಮೊದಲ ಹಂತದಲ್ಲೇ ತಮಗೆ ಸಚಿವ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಯಾರನ್ನು ಕೈಬಿಡಬೇಕು, ಯಾರನ್ನು ಸಂಪುಟದಲ್ಲಿ ಉಳಿಸಿಕೊಳ್ಳಬೇಕು ಎಂಬುದು ಹೈಕಮಾಂಡ್‌ಗೆ ತಲೆನೋವಾಗಿದ್ದರೂ ಅಂತಿಮವಾಗಿ ೧೨ ರಿಂದ ೧೪ ಸಚಿವರಿಗಷ್ಟೇ ಅವಕಾಶ ನೀಡುವ ನಿರ್ಧಾರವನ್ನು ಹೈಕಮಾಂಡ್ ಕೈಗೊಂಡಿದೆ ಎಂದು ಹೇಳಲಾಗಿದೆ.


ಹಿರಿಯರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಹೆಚ್. ಮುನಿಯಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಯು.ಟಿ. ಖಾದರ್, ಎಚ್.ಕೆ. ಪಾಟೀಲ್, ಎಚ್.ಸಿ. ಮಹದೇವಪ್ಪ, ಶಿವಾನಂದ ಪಾಟೀಲ್, ಬೈರತಿ ಸುರೇಶ್, ಚೆಲುವರಾಯಸ್ವಾಮಿ ಇವರುಗಳಿಗೆ ಸಚಿವ ಪಟ್ಟ ಸಿಗುವ ಸಾಧ್ಯತೆಗಳಿವೆ.


ಕಾಂಗ್ರೆಸ್‌ನಲ್ಲಿ ಅಂತಿಮ ಕ್ಷಣದವರೆಗೂ ಪಟ್ಟಿ ಬದಲಾವಣೆಯಾಗುವುದು ಸಹಜ. ಹಾಗಾಗಿ ಪ್ರಮಾಣ ವಚನ ಸ್ವೀಕರಿಸುವ ಹೊತ್ತಿಗೆ ಕೆಲವು ಹೆಸರುಗಳು ಕೈಬಿಟ್ಟು ಹೊಸ ಹೆಸರುಗಳು ಸೇರ್ಪಡೆಯಾದರೂ ಅಚ್ಚರಿಯಿಲ್ಲ.


ದೆಹಲಿಯಲ್ಲಿ ಬೀಡು ಬಿಟ್ಟ ಆಕಾಂಕ್ಷಿಗಳು


ರಾಜ್ಯ ಸಚಿವ ಸಂಪುಟದಲ್ಲಿ ಶತಾಯ ಗತಾಯ ಸ್ಥಾನ ಪಡೆಯಲು ೪೦ಕ್ಕೂ ಹೆಚ್ಚು ಸಚಿವಾಕಾಂಕ್ಷಿ ಶಾಸಕರುಗಳು ಕಳೆದ ೨ ದಿನಗಳಿಂದ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದು, ಹೈಕಮಾಂಡ್ ಮಟ್ಟದಲ್ಲಿ ತಮ್ಮ ಗಾಡ್‌ಫಾದರ್‌ಗಳ ಮೂಲಕ ಸಚಿವ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದಾರೆ.


ಜೂನ್ ೧೮ರ ನಂತರ ೨ನೇ ಹಂತದ ಸಂಪುಟ


ನಾಳೆ ಮೊದಲ ಹಂತದ ಸಂಪುಟ ರಚನೆಯಾದ ಬಳಿಕ ವಿಧಾನ ಪರಿಷತ್ ಹಾಗೂ ರಾಜ್ಯಸಭೆಯ ಚುನಾವಣೆ ಮುಗಿದ ಬಳಿಕ ೨ನೇ ಹಂತದ ಸಂಪುಟ ರಚನೆಯಾಗಲಿದ್ದು, ಬಹುತೇಕ ಈ ತಿಂಗಳ ಅಂತ್ಯದೊಳಗೆ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಲಿದೆ.


ಸಚಿವ ಸಂಪುಟ ರಚನೆಯಲ ಮಾತುಕತೆಗಳಲ್ಲಿ ಭಾಗಿಯಾಗಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆಯೇ ದೆಹಲಿಗೆ ತೆರಳಿದ್ದು, ನಿನ್ನೆ ಸಂಜೆ ನಡೆಯಬೇಕಿದ್ದ ಸಭೆ ರಾಹುಲ್‌ಗಾಂಧಿಯವರ ಅಲಭ್ಯತೆಯ ಕಾರಣ ನಡೆಯಲಿಲ್ಲ. ಹಾಗಾಗಿ ಇಂದು ಬೆಳಿಗ್ಗೆ ಎಐಸಿಸಿ ಅಧ್ಯಕ್ಷರ ನಿವಾಸದಲ್ಲಿ ಸಭೆ ನಡೆದಿದ್ದು, ಸಂಜೆ ಹೊತ್ತಿಗೆ ಸಚಿವರುಗಳು ಹೆಸರುಗಳ ಸ್ಪಷ್ಟ ಚಿತ್ರಣ ಸಿಗಲಿದೆ.


ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಇಂದು ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದು, ಹೈಕಮಾಂಡೇ ಅಂತಿಮವಾಗಿ ಸಚಿವರುಗಳ ಪಟ್ಟಿಯನ್ನು ಪ್ರಕಟಿಸಲಿದೆ.

ಕೆಪಿಸಿಸಿ ಸಾರಥಿ ಬಗ್ಗೆಯೂ ತೀರ್ಮಾನ


ಸಚಿವರ ಪಟ್ಟಿ ಜತೆಗೆ ನೂತನ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆಯೂ ವರಿಷ್ಠರ ಸಭೆಯಲ್ಲಿ ಚರ್ಚೆ ನಡೆದಿದ್ದು, ಕೆಪಿಸಿಸಿಗೆ ನೂತನ ಸಾರಥಿ ಯಾರಾಗಲಿದ್ದಾರೆ ಎಂಬುದು ಬಹುತೇಕ ಇಂದೇ ಅಂತಿಮವಾಗಲಿದೆ.


ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿಯವರ ನೇಮಕಕ್ಕೆ ಹೈಕಮಾಂಡ್ ಒಲವು ತೋರಿತ್ತಾದರೂ ಜಾರಕಿಹೊಳಿ ಅವರು ಸಚಿವ ಸ್ಥಾನದ ಬೇಡಿಕೆಯನ್ನಿಟ್ಟಿದ್ದಾರೆ. ಎರಡು ಹುದ್ದೆಗಳನ್ನು ನೀಡಲು ಸಾಧ್ಯವಿಲ್ಲ. ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ವರಿಷ್ಠರು ಸತೀಶ್ ಜಾರಕಿಹೊಳಿಯವರಿಗೆ ಹೇಳಿದ್ದಾರಾದರೂ ಎರಡು ಹುದ್ದೆಗಳನ್ನು ಪಡೆಯಲೇಬೇಕೆಂದು ಸತೀಶ್ ಜಾರಕಿಹೊಳಿಯವರು ದೆಹಲಿಯಲ್ಲಿ ಲಾಬಿ ನಡೆಸಿದ್ದು, ನಿನ್ನೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ರವರ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.


ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಹರಿಪ್ರಸಾದ್ ರವರ ಹೆಸರು ಮುನ್ನಲೆಗೆ ಬಂದಿದೆ.
ಒಂದು ವೇಳೆ ಸತೀಶ್ ಜಾರಕಿಹೊಳಿಯವರು ಸಚಿವರಾದರೆ ಹರಿಪ್ರಸಾದ್ ರವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಗಳಿವೆ.


ವಿಧಾನಸಭೆಯ ಸ್ಪೀಕರ್ ಯಾರಾಗಬೇಕು ಎಂಬ ಬಗ್ಗೆಯೂ ವರಿಷ್ಠರ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಹಿರಿಯರಾದ ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್ ಅಥವಾ ದಿನೇಶ್ ಗುಂಡೂರಾವ್ ಸಭಾಧ್ಯಕ್ಷರಾಗುವ ಸಾಧ್ಯತೆಗಳಿವೆ.