Home ಜಿಲ್ಲೆ ಖರ್ಗೆ ಭಾಗವಹಿಸಿದ್ದ ಸ್ಥಳ ‘ಶುದ್ಧೀಕರಣ’ ತೀವ್ರ ಖಂಡನೀಯ: ಬಾಬುರಾವ್ ಕಾಡ್ಲೂರು

ಖರ್ಗೆ ಭಾಗವಹಿಸಿದ್ದ ಸ್ಥಳ ‘ಶುದ್ಧೀಕರಣ’ ತೀವ್ರ ಖಂಡನೀಯ: ಬಾಬುರಾವ್ ಕಾಡ್ಲೂರು

ಯಾದಗಿರಿ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ ೮ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಅವರು ಕುಳಿತಿದ್ದ ಸ್ಥಳವನ್ನು ‘ಶುದ್ಧೀಕರಣ’ದ ಹೆಸರಿನಲ್ಲಿ ಸ್ವಚ್ಛಗೊಳಿಸಲಾಗಿದೆ ಎಂಬ ವರದಿ ತೀವ್ರ ಖಂಡನೀಯವಾಗಿದೆ ಎಂದು ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರು ಹೇಳಿದ್ದಾರೆ.

ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಅವರು, ಆಧುನಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಯ ಆಧಾರದ ಮೇಲೆ ವ್ಯಕ್ತಿಯೊಬ್ಬರು ಬಳಸಿದ ಸ್ಥಳವನ್ನು ‘ಶುದ್ಧೀಕರಿಸುವ’ ಮನೋಭಾವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೨೧ನೇ ಶತಮಾನದಲ್ಲಿಯೂ ಭಾರತದಲ್ಲಿ ಅಸ್ಪೃಶ್ಯತೆಯಂತಹ ಘಟನೆಗಳು ನಡೆಯುತ್ತಿರುವುದು ಇಡೀ ಮಾನವಕುಲವೇ ತಲೆತಗ್ಗಿಸುವ ವಿಚಾರವಾಗಿದೆ. ದಲಿತ ಸಮುದಾಯದ ಪ್ರಮುಖ ನಾಯಕ ಹಾಗೂ ದೇಶದ ಉನ್ನತ ಸಾಂವಿಧಾನಿಕ ಸ್ಥಾನದಲ್ಲಿರುವ ಖರ್ಗೆ ಅವರು ಭಾಗವಹಿಸಿದ ಸ್ಥಳವನ್ನು ಜಾತಿಯ ಕಾರಣಕ್ಕಾಗಿ ಶುದ್ಧೀಕರಿಸಲಾಗಿದೆ ಎನ್ನುವುದು ಜಾತೀಯ ಮನೋಭಾವದ ಪ್ರತೀಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿಗೆ ಮಾಡಿರುವ ಅವಮಾನವೆಂದು ಈ ಘಟನೆಯನ್ನು ಸೀಮಿತಗೊಳಿಸದೆ, ಇಂತಹ ಘಟನೆಗಳು ಸಮಾಜದಲ್ಲಿನ ಕೋಟ್ಯಂತರ ದಲಿತರ ಆತ್ಮಗೌರವಕ್ಕೆ ಧಕ್ಕೆ ತರುವಂತಹವು ಎಂಬುದನ್ನು ಅರಿತುಕೊಳ್ಳಬೇಕಿದೆ. ಜಾತಿ, ಅಸ್ಪೃಶ್ಯತೆ ಹಾಗೂ ತಾರತಮ್ಯದ ಮನೋಭಾವಗಳಿಗೆ ಸಮಾಜದಲ್ಲಿ ಯಾವುದೇ ಅವಕಾಶ ಇರಬಾರದು ಎಂದು ಅವರು ಹೇಳಿದರು.

ಭಾರತವು ಇಂದು ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಜಾತಿ ಆಧಾರಿತ ತಾರತಮ್ಯದ ಘಟನೆಗಳು ಮರುಕಳಿಸುವುದು ಅತ್ಯಂತ ವಿಷಾದನೀಯ. ಇಂತಹ ಮನೋಭಾವ ಹಾಗೂ ಆಚರಣೆಗಳಿಗೆ ತಮ್ಮ ತೀವ್ರ ವಿರೋಧವಿದೆ ಎಂದು ಬಾಬುರಾವ್ ಕಾಡ್ಲೂರು ತಿಳಿಸಿದ್ದಾರೆ.