Home ಜಿಲ್ಲೆ ಆಧ್ಯಾತ್ಮಿಕ ಜಾಗೃತಿಗಾಗಿ ಜನಜಾಗೃತಿ ಜಾತ್ರೆ: ಆನಂದ ದೇವರು

ಆಧ್ಯಾತ್ಮಿಕ ಜಾಗೃತಿಗಾಗಿ ಜನಜಾಗೃತಿ ಜಾತ್ರೆ: ಆನಂದ ದೇವರು

ಜಮಖಂಡಿ, ಜೂ 17:ಆಚಾರ, ವಿಚಾರ, ಸಂಸ್ಕಾರ ಮತ್ತು ಸಂಸ್ಕøತಿಯ ಕುರಿತು ಇಂದಿನ ಪೀಳಿಗೆಗೆ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಜನಜಾಗೃತಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಓಲೆಮಠದ ಆನಂದ ದೇವರು ಶ್ರೀಗಳು ಹೇಳಿದರು.
ನಗರದ ಓಲೆಮಠದ ಆಶ್ರಯದಲ್ಲಿ, ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪದೊಂದಿಗೆ “ದುಶ್ಚಟಗಳ ಭಿಕ್ಷೆ – ಸದ್ಗುಣಗಳ ದೀಕ್ಷೆ” ಎಂಬ ಧ್ಯೇಯದಡಿ ಜಮಖಂಡಿ ತಾಲ್ಲೂಕಿನ ಜಂಬಗಿ ಕೆಡಿ ಗ್ರಾಮದಲ್ಲಿ ಐದು ದಿನಗಳ ಕಾಲ ನಡೆದ ಜನಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಗವಂತನು ಮಾನವನಿಗೆ ಭೂಮಿ, ನೀರು ಮತ್ತು ಗಾಳಿ ಸೇರಿದಂತೆ ಅಮೂಲ್ಯ ಸಂಪನ್ಮೂಲಗಳನ್ನು ನೀಡಿದ್ದಾನೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನವನ್ನು ಸಾರ್ಥಕ ಹಾಗೂ ಬಂಗಾರಮಯ ಮಾಡಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಅವರು ಕರೆ ನೀಡಿದರು.
ದುಡಿಯಲು ದೊರೆತಿರುವ ಕೈಗಳನ್ನು ಸಾರ್ಥಕಗೊಳಿಸಬೇಕು. ಹಸಿದವರಿಗೆ ಅನ್ನ ನೀಡುವ ಮತ್ತು ದುಃಖದಲ್ಲಿರುವವರ ಕಣ್ಣೀರು ಒರೆಸುವ ಕೈಗಳಿಗೆ ಮಾತ್ರ ನಿಜವಾದ ಮೌಲ್ಯ ದೊರೆಯುತ್ತದೆ ಎಂದು ಅವರು ತಿಳಿಸಿದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನೀಡುತ್ತ, ಗುರು ಸಂತೃಪ್ತನಾದರೆ ಮಳೆ-ಬೆಳೆ ಸಮೃದ್ಧಿಯಾಗುತ್ತದೆ. ಆದ್ದರಿಂದ ಗುರುವಿನಿಂದ ಲಿಂಗದೀಕ್ಷೆ ಪಡೆದು, ಅವರು ತೋರಿಸುವ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಓಲೆಮಠದ ಲಿಂ. ಡಾ. ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಸೇವೆಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಶೂರ್ಪಾಲಿಯ ಸಂಗಯ್ಯ ಸ್ವಾಮಿಗಳು, ಟಕ್ಕಳಕಿಯ ರುದ್ರಯ್ಯ ಹಿರೇಮಠ, ಜಂಬಗಿ ಕೆಡಿಯ ಬಸಯ್ಯ ಮಠಪತಿ, ಈರಯ್ಯ ಹಿರೇಮಠ ಉಪಸ್ಥಿತರಿದ್ದರು. ಬಸವೇಶ್ವರ ಭಜನಾ ಸಂಘದ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ಶೇಖರ ಮಲಕಪ್ಪನವರ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಮಹಿಳೆಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ರೊಟ್ಟಿಬುತ್ತಿ ಜಾತ್ರೆಯನ್ನು ಭಕ್ತಿ, ಸಡಗರ ಹಾಗೂ ಸಂಭ್ರಮದಿಂದ ನೆರವೇರಿಸಿದರು. ಕರೆಮ್ಮದೇವಿ ಡೊಳ್ಳಿನ ಸಂಘದ ಕಲಾವಿದರು ಡೊಳ್ಳು ಕುಣಿತ ಪ್ರದರ್ಶಿಸಿ ಜಾತ್ರೆಗೆ ವಿಶೇಷ ಕಳೆ ತಂದರು.
ಮುಂದಿನ ಐದು ದಿನಗಳ ಜನಜಾಗೃತಿ ಕಾರ್ಯಕ್ರಮಕ್ಕಾಗಿ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಸದ್ಭಕ್ತರಿಗೆ ಜನಜಾಗೃತಿ ಜ್ಯೋತಿಯನ್ನು ಹಸ್ತಾಂತರಿಸಲಾಯಿತು.