Home ಜಿಲ್ಲೆ ಮನೆಗೆ ಬರುವ ಬಿಎಲ್‍ಒಗಳಿಗೆ ಸರಿಯಾದ ಮಾಹಿತಿ ನೀಡಿ: ತಹಶೀಲ್ದಾರ್ ಸುರೇಶ್ ಅಂಕಲಗಿ

ಮನೆಗೆ ಬರುವ ಬಿಎಲ್‍ಒಗಳಿಗೆ ಸರಿಯಾದ ಮಾಹಿತಿ ನೀಡಿ: ತಹಶೀಲ್ದಾರ್ ಸುರೇಶ್ ಅಂಕಲಗಿ

ಯಾದಗಿರಿ: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಕಾರ್ಯದ ಅಂಗವಾಗಿ ಮನೆಗೆ ಭೇಟಿ ನೀಡುವ ಬಿಎಲ್‍ಒಗಳಿಗೆ ಮತದಾರರು ಅಗತ್ಯ ದಾಖಲೆಗಳೊಂದಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಯಾದಗಿರಿ ತಹಶೀಲ್ದಾರ್ ಸುರೇಶ್ ಅಂಕಲಗಿ ಮನವಿ ಮಾಡಿದರು.

ನಗರದ ಮೈಲಾಪುರ ಅಗಸಿ ಪ್ರದೇಶದಲ್ಲಿ ನಡೆಯುತ್ತಿದ್ದ ಎಸ್‍ಐಆರ್ ಕಾರ್ಯವನ್ನು ಬುಧವಾರ ಪರಿಶೀಲಿಸಿದ ಅವರು, ಬಿಎಲ್‍ಒಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಮನೆಗಳ ಬಾಗಿಲಿಗೆ ಸ್ಟಿಕರ್ ಅಂಟಿಸಿ ಎನ್ಯೂಮರೇಷನ್ (ಇಟಿumeಡಿಚಿಣioಟಿ) ಫಾರಂ ವಿತರಿಸುತ್ತಿರುವ ಕುರಿತು ಮಾಹಿತಿ ಪಡೆದರು.

ಬಿಎಲ್‍ಒಗಳು ಮತದಾರರಿಗೆ ಫಾರಂ ವಿತರಿಸುವುದರೊಂದಿಗೆ ಅದನ್ನು ಹೇಗೆ ಭರ್ತಿ ಮಾಡಬೇಕು, ಯಾವ ದಾಖಲೆಗಳನ್ನು ಲಗತ್ತಿಸಬೇಕು ಹಾಗೂ ಭರ್ತಿ ಮಾಡಿದ ನಮೂನೆಯನ್ನು ನಿಗದಿತ ಅವಧಿಯೊಳಗೆ ವಾಪಸ್ ಸಲ್ಲಿಸಬೇಕು ಎಂಬ ಕುರಿತು ಸಮಗ್ರ ಮಾಹಿತಿ ನೀಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಸುರೇಶ್ ಅಂಕಲಗಿ, ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ವಿಶೇಷ ಮತದಾರರ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಜುಲೈ 29ರವರೆಗೆ ಬಿಎಲ್‍ಒಗಳು ಮನೆಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರಂ ವಿತರಿಸಲಿದ್ದಾರೆ. ಮತದಾರರು ಅಗತ್ಯ ದಾಖಲಾತಿಗಳೊಂದಿಗೆ ನಿಖರ ಮಾಹಿತಿ ನೀಡಿ ಈ ಕಾರ್ಯಕ್ಕೆ ಸಹಕರಿಸಬೇಕು. ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.

ಪರಿಶೀಲನೆ ವೇಳೆ ಕಂದಾಯ ನಿರೀಕ್ಷಕ ಗಿರೀಶ್, ಮೇಲ್ವಿಚಾರಕ ಸುರೇಶ್ ಹಾಗೂ ಬಿಎಲ್‍ಒಗಳಾದ ಪ್ರಭಾವತಿ, ಈರಮ್ಮ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.