
ಆಳಂದ:ಜೂ.18: ಖಜೂರಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಖಜೂರಿ ವಲಯದ ರೈತರು ಕೇಂದ್ರದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡಸಿ ಕ್ರಮಕ್ಕೆ ಒತ್ತಾಯಿಸಿದರು.
ಖಜೂರಿ ವಲಯದ ವಿವಿಧ ಗ್ರಾಮಗಳ ರೈತರಿಗೆ ಸರ್ಕಾರದಿಂದ ಒದಗಿಸಲಾಗುತ್ತಿರುವ ಬಿತ್ತನೆ ಬೀಜಗಳನ್ನು ಸಮಾನವಾಗಿ ವಿತರಿಸಬೇಕಾದ ಜವಾಬ್ದಾರಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಮೇಲಿದೆ. ಆದರೆ ಖಜೂರಿ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು ಮನಬಂದಂತೆ ತಮಗೆ ಬೇಕಾದ ರೈತರಿಗೆ ಹಾಗೂ ನಿರ್ದಿಷ್ಟ ಹಳ್ಳಿಗಳಿಗೆ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬೀಜ ವಿತರಿಸುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
ಕಳೆದ ವರ್ಷವೂ ನೆರೆ ಹಳ್ಳಿಗಳ ಅನೇಕ ರೈತರು ಬಿತ್ತನೆ ಬೀಜ ಪಡೆಯಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವರ್ಷವೂ ರಾಜಕೀಯ ಪ್ರಭಾವ ಇರುವ ಹಳ್ಳಿಗಳಿಗೆ ಹಾಗೂ ಕೆಲ ಆಯ್ದ ರೈತರಿಗೆ ಮಾತ್ರ ಬೀಜ ನೀಡಲಾಗುತ್ತಿದ್ದು, ಉಳಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ಮುಂಗಾರು ಬಿತ್ತನೆ ಅವಧಿಯಲ್ಲಿ ಬೀಜಗಳ ಕೊರತೆ ಎದುರಾದರೆ ರೈತರ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀಳಲಿದೆ. ಹೀಗಾಗಿ ಬೀಜ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲ ಅರ್ಹ ರೈತರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ರೈತರಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ. ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮುಖಂಡ ಕುಮಾರ ಬಂಡೆ, ಆಳಂಗಾ ಗ್ರಾಪಂ ಮಾಜಿ ಅಧ್ಯಕ್ಷ ಪ್ರಫುಲ ಬಾಬಳಸುರ, ಶರಣಬಸಪ್ಪ ಬನಶೆಟ್ಟಿ, ಬಳಿರಾಮ ತಡೋಳಾ, ತುಕಾರಾಮ ಮುರುಮೆ ಸೇರಿದಂತೆ ಖಜೂರಿ ವಲಯದ ವಿವಿಧ ಗ್ರಾಮದ ಅನೇಕ ರೈತರು ಭಾಗವಹಿಸಿದ್ದರು.
ಮನವಿ ಸ್ವೀಕರಿಸಿದ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ವಿ. ಅವರು ಈ ಕುರಿತು ಸೂಕ್ತ ನಿರ್ದೇಶನ ನೀಡಲಾಗುವುದು. ಯಾವುದೇ ತಾರತಮ್ಯೆ ಸಹಿಸಲಾಗದು ಎಲ್ಲ ಅರ್ಹ ರೈತರಿಗೆ ಬೀಜಗಳನ್ನು ವಿತರಣೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.


























