
ಯಾದಗಿರಿ: ಜಿಲ್ಲಾ ಕೇಂದ್ರ ಯಾದಗಿರಿ ನಗರವು ಪ್ರತಿವರ್ಷ ವಿಸ್ತಾರಗೊಳ್ಳುತ್ತಿದ್ದು, ಜನರ ಬೇಡಿಕೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ನಗರದ ಎಲ್ಲ ವಾರ್ಡ್ಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ನಗರದ ವಾರ್ಡ್ ಸಂಖ್ಯೆ ೨೨ರ ವೀರಶೈವ ಕಲ್ಯಾಣ ಮಂಟಪದ ಸಮೀಪ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಟಿಎಸ್‌ಪಿ ಯೋಜನೆಯಡಿ ನಿರ್ಮಿತಿ ಕೇಂದ್ರದ ವತಿಯಿಂದ ಅಂದಾಜು ?೨೫ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ನಗರದ ಜನರಿಗೆ ಅನುಕೂಲವಾಗುವ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರದಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನಪರ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ನಗರದ ಹಲವು ವಾರ್ಡ್ಗಳಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರದಿಂದ ?೫೫ ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ವಿವಿಧ ವಾರ್ಡ್ಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ನಗರದ ಜನರ ಬಹುದಿನಗಳ ಬೇಡಿಕೆಯಾಗಿರುವ ಭೀಮಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಕೆಲ ತಾಂತ್ರಿಕ ಕಾರಣಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಗೆ ವೇಗ ನೀಡುವಂತೆ ಸಂಬAಧಪಟ್ಟ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಶಾಸಕ ತುನ್ನೂರು ತಿಳಿಸಿದರು.
ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಉತ್ತಮ ಆಡಳಿತ ನೀಡುವುದರೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಅರ್ಹ ಜನರಿಗೆ ತಲುಪಿಸುತ್ತಿದೆ. ತಾವು ಗ್ರಾಮೀಣ ಭಾಗದಿಂದ ಬಂದಿದ್ದು, ಅಲ್ಲಿನ ಜನರ ಸಮಸ್ಯೆಗಳ ಅರಿವು ಇದೆ. ಜನರ ಅಗತ್ಯ ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಯಾವುದೇ ಇಲಾಖೆಯ ಕಾಮಗಾರಿಯಾಗಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಗಳನ್ನು ನಿಯಮಾನುಸಾರ ಗುಣಮಟ್ಟದಿಂದ ನಿರ್ವಹಿಸಬೇಕು. ಹಲವು ಸಂದರ್ಭಗಳಲ್ಲಿ ಕಾಮಗಾರಿ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಜನರಿಗೆ ದೀರ್ಘಕಾಲ ಪ್ರಯೋಜನವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಿದ್ದಯ್ಯಸ್ವಾಮಿ ಹಿರೇಮಠ, ನಿರ್ಮಿತಿ ಕೇಂದ್ರದ ಸಹಾಯಕ ಎಂಜಿನಿಯರ್ ರವಿಕುಮಾರ ಕಂದಕೂರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ, ಮುಖಂಡರಾದ ನಿಂಗಪ್ಪ ಜಾಲಗಾರ, ಚಂದ್ರಕಾAತ ಮುನಿಯಪ್ಪನೋರ್, ವಿಶ್ವನಾಥ ನಾಯಕ, ಶಿವು ಬೆಳಗುಂದಿ, ತಿಮ್ಮಣ್ಣ ನಾಯಕ, ಬೀರಲಿಂಗ ಪೂಜಾರಿ, ಶಿವು ಕಂದಳ್ಳಿ, ರೀಯಾನ್ ಅಲಿ ತುಮಕೂರು, ಫಯಾಜ್ ಮುಲ್ಲಾ, ಸಾಯಿಬಣ್ಣ ಬಾಡಿಯಾಳ, ಮಲ್ಲಯ್ಯ ಕಸಬಿ, ವೆಂಕಟೇಶ ನಾಗುಂಡಿ, ಶಂಕರ್ ಸೋನಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





























