Home ಜಿಲ್ಲೆ ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ

ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ

ಸೈದಾಪುರ: ನಾಡಿನ ಸಂಸ್ಕಾರ, ಸಂಸ್ಕೃತಿ ಹಾಗೂ ಪಾರಂಪರಿಕ ಆಚರಣೆಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಅವುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಗುರುಮಠಕಲ್ ಖಾಸಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಕಾಳೆಬೆಳಗುಂದಿ ಗ್ರಾಮದ ಶ್ರೀ ಬನದೇಶ್ವರ ದೇವಸ್ಥಾನದಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲಾ ಗಾಣಿಗ ಸಮಾಜದ ವತಿಯಿಂದ ಸೋಮವಾರ ಆಯೋಜಿಸಿದ್ದ ಕಿರು ರಥೋತ್ಸವ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಧಾರ್ಮಿಕ ಆಚರಣೆಗಳು ಕೇವಲ ಸಂಪ್ರದಾಯಗಳಿಗೆ ಸೀಮಿತವಾಗದೆ ಸಮಾಜದಲ್ಲಿ ಒಗ್ಗಟ್ಟು, ಭಕ್ತಿ ಮತ್ತು ಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯುವಜನರು ನಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಅರಿತು ಅವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಶ್ರೀಗಳು ಕರೆ ನೀಡಿದರು.
ಬನದೇಶ್ವರ ದೇವರ ಕಿರು ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು. ಭಕ್ತರು ರಥವನ್ನು ಎಳೆದು ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವೂ ಭಕ್ತಿಭಾವದಿಂದ ನಡೆಯಿತು.
ಈ ಸಂದರ್ಭದಲ್ಲಿ ಸೈದಾಪುರ ಸಿದ್ದ ಚೇತನಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮಿ , ಕೊಟ್ರೇಶ್ವರ ಸ್ವಾಮಿ ಯಲ್ಹೇರಿ, ಸಮಾಜದ ಹಿರಿಯ ಮುಖಂಡ ಪ್ರಕಾಶ ಸಜ್ಜನ, ರಾಯಚೂರು ಜಿಲ್ಲಾಧ್ಯಕ್ಷ ಚೆನ್ನಪ್ಪ ಸಜ್ಜನ, ತಾಲ್ಲೂಕಾಧ್ಯಕ್ಷ ಜಗದೀಶ ಸಜ್ಜನ್ ಸೌರಾಷ್ಟ್ರಹಳ್ಳಿ, ಸಿದ್ರಾಮಪ್ಪ ದುಪ್ಪಲ್ಲಿ, ವಿಜಯ ಕುಮಾರ್ ಯಲ್ಹೇರಿ, ಸುರೇಶ ಮಾಧ್ವಾರ, ಹಂಪಣ್ಣ ಸಜ್ಜನ ಶೆಟ್ಟಿ, ಅಶೋಕ ಯಾದಗಿರಿ, ಬಸವರಾಜ ಯಾದಗಿರಿ, ಮಲ್ಲಿಕಾರ್ಜುನ, ಬನ್ನಪ್ಪ ಬಾಡಿಯಾಳ, ರವಿಕುಮಾರ ಮಾಧ್ವಾರ, ಬನ್ನಪ್ಪ ಕಡೇಚೂರ, ಪ್ರಶಾಂತ್ ವಡವಟ್, ವಿರೂಪಾಕ್ಷಿ ಕಿಲ್ಲನಕೇರಾ, ರಾಜು ಬದ್ದೇಪಲ್ಲಿ, ಪ್ರಕಾಶ ಗುರುಮಠಕಲ್, ವೀರೇಶ ಸಜ್ಜನ ಕಡೇಚೂರು ಸೇರಿದಂತೆ ಗಾಣಿಗ ಸಮಾಜದ ಮುಖಂಡರು, ಪದಾಧಿಕಾರಿಗಳು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.