
ಶಹಾಪುರ: ತಾಲೂಕಿನ ದೋರನಹಳ್ಳಿ ಪಟ್ಟಣದ ಹೊರವಲಯದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಪ್ರಮಾಣದಲ್ಲಿ ಅಕ್ರಮ ಇಟ್ಟಿಗೆ ಭಟ್ಟಿ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದೋರನಹಳ್ಳಿ ಪಟ್ಟಣದ ನಿವಾಸಿ ಸಾಬಣ್ಣ ಗೋಷಿ ಎಂಬುವವರು ಯಾವುದೇ ಅಗತ್ಯ ಪರವಾನಗಿ ಪಡೆಯದೆ ಸುಮಾರು ೬ ಸಾವಿರ ಮೆಟ್ರಿಕ್ ಟನ್‌ಗೂ ಅಧಿಕ ಕಪ್ಪು ಮಣ್ಣನ್ನು ಸಂಗ್ರಹಿಸಿಕೊAಡು ಇಟ್ಟಿಗೆ ಭಟ್ಟಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಕ್ರಮ ಮರಳು ಸಾಗಾಟ, ಅಕ್ರಮ ಗಣಿಗಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಈತನ ಹೆಸರು ಕೇಳಿಬರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜೆಸಿಬಿ ಹಾಗೂ ಟಿಪ್ಪರ್ ವಾಹನಗಳನ್ನು ಹೊಂದಿದ್ದಾರೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ. ಈ ಹಿಂದೆ ಕೂಡ ಇಂತಹ ಚಟುವಟಿಕೆಗಳ ಕುರಿತು ಸಂಬAಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಬಳಕೆಯಾಗಬೇಕಾದ ಜಮೀನನ್ನು ಯಾವುದೇ ಭೂ ಪರಿವರ್ತನೆ ಮಾಡದೆ ಇಟ್ಟಿಗೆ ಭಟ್ಟಿ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಕೃಷಿ ಭೂಮಿಯ ಮಾಲೀಕರು ಹಣದ ಆಸೆಗೆ ಇಂತಹ ಚಟುವಟಿಕೆಗೆ ಅವಕಾಶ ನೀಡಿದ್ದರೆ, ಸಂಬAಧಪಟ್ಟ ಭೂ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಟ್ಟಿಗೆ ಭಟ್ಟಿ ನಿರ್ಮಾಣವಾಗುತ್ತಿರುವ ಪ್ರದೇಶದ ಸುತ್ತಮುತ್ತ ದಟ್ಟ ಜನವಸತಿ, ಸರ್ಕಾರಿ ಆಸ್ಪತ್ರೆ ಹಾಗೂ ರಾಜ್ಯ ಹೆದ್ದಾರಿ ಇರುವುದರಿಂದ ಭಟ್ಟಿ ಕಾರ್ಯಾರಂಭವಾದ ಬಳಿಕ ಹೊಗೆ ಮತ್ತು ಧೂಳಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ದೋರನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ಬಳಿಕ ತಹಶೀಲ್ದಾರ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದರೂ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎನ್ನಲಾದ ಮಣ್ಣನ್ನು ವಶಕ್ಕೆ ಪಡೆಯದೇ ಸಂಬAಧಪಟ್ಟ ಇಲಾಖೆಗಳು ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ಅಕ್ರಮವಾಗಿ ಸಂಗ್ರಹಿಸಿರುವ ಮಣ್ಣನ್ನು ವಶಕ್ಕೆ ಪಡೆದು, ನಿಯಮಬಾಹಿರವಾಗಿ ನಡೆಯುತ್ತಿರುವ ಇಟ್ಟಿಗೆ ಭಟ್ಟಿ ನಿರ್ಮಾಣ ಕಾಮಗಾರಿಯನ್ನು ತೆರವುಗೊಳಿಸಬೇಕು. ಅಕ್ರಮ ಗಣಿಗಾರಿಕೆ, ಮರಳು ಸಾಗಾಟ ಸೇರಿದಂತೆ ಇತರ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬAದಲ್ಲಿ ಸಾಬಣ್ಣ ಗೋಷಿ ಹಾಗೂ ಕೃಷಿ ಭೂಮಿ ನೀಡಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.





























