
ಕಲಬುರಗಿ,ಅ.24-ಕಲ್ಲ ಹಂಗರಗಾ ಗ್ರಾಮದಿಂದ ಕಲಬುರಗಿ ನಗರಕ್ಕೆ ಆಗಮಿಸುವ ಮುಖ್ಯ ರಸ್ತೆಯ ಮಧ್ಯೆ ಬರುವ ಜಂಬಗಾ ಕ್ರಾಸ್ ಹತ್ತಿರದ ದೊಡ್ಡ ಸೇತುವೆಯ ಮೇಲೆ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಈ ರಸ್ತೆಯು ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು, ಸೇತುವೆಯ ಮೇಲೆ ಬಿದ್ದಿರುವ ದೊಡ್ಡ ಗುಂಡಿಗಳಿಂದ ಅಪಘಾತ ಸಂಭವಿಸುವ ಆತಂಕ ಎದುರಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ.
ಆದರೆ, ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಸೇನೆಯ ವಿಭಾಗೀಯ ಅಧ್ಯಕ್ಷರಾದ ಕಪಿಲ ಜೆ. ವಾಲಿ ಅವರು ಆಗ್ರಹಿಸಿದ್ದಾರೆ.
ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಈ ಸಮಸ್ಯೆಯನ್ನು ಇನ್ನೂ ವಿಳಂಬ ಮಾಡದೆ, ಸೇತುವೆಯ ಮೇಲಿರುವ ದೊಡ್ಡ ಗುಂಡಿಗಳನ್ನು ಕೂಡಲೇ ಮುಚ್ಚಿ, ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದಲಿತ ಸೇನೆಯ ಎಚ್ಚರಿಕೆ
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ, ದಲಿತ ಸೇನೆಯ ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಜಂಬಗ ಕ್ರಾಸ್ ಬಳಿ ರಸ್ತೆ ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸೇನೆಯ ವಿಭಾಗೀಯ ಅಧ್ಯಕ್ಷರಾದ ಕಪಿಲ ಜೆ. ವಾಲಿ ಅವರು ಎಚ್ಚರಿಕೆ ನೀಡಿದ್ದಾರೆ.






















