
ಚಿಕ್ಕನಾಯಕನಹಳ್ಳಿ, ಜೂ. ೧೩- ಪ್ರೊ. ನಂಜುಂಡಸ್ವಾಮಿ ಯವರ ಹೋರಾಟದ ದಿಕ್ಕಿನೆಡೆ ರೈತ ಸಂಘ ಸಾಗಿದಾಗ ಮಾತ್ರ ಪ್ರತಿಫಲದೊಂದಿಗೆ ರೈತನ ಸ್ವಾಭಿಮಾನವೂ ಸಹ ಉಳಿಯಲಿದೆ ಎಂದು ರೈತ ಹೋರಾಟಗಾರ ಅಜ್ಜೇನಹಳ್ಳಿ ಶರತ್‌ಕುಮಾರ್ ಹೇಳಿದರು.
ಪಟ್ಟಣಕ್ಕೆ ಸಮೀಪವಿರುವ ಶ್ಯಾವಿಗೆಹಳ್ಳಿ ಬಳಿ ರೈತ ಹೋರಾಟ ಸಮಿತಿಯ ನೂತನ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ೧೮-೨೦ ವರ್ಷಗಳಿಂದ ಬರಪೀಡಿತ ನಮ್ಮ ತಾಲ್ಲೂಕಿಗೆ ೨೬ ಕೆರೆಗಳಿಗೆ ನೀರುಣಿಸುವ ಹೇಮಾವತಿ ಯೋಜನೆ ಜಾರಿಗೊಂಡರೂ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಈ ಯೋಜನೆ ಜಾರಿಗೊಳಿಸುವಲ್ಲಿ ನಮ್ಮ ಹೋರಾಟದ ಇತಿಹಾಸವೇ ಇದೆ. ಶೆಟ್ಟಿಕೆರೆ ಭಾಗದ ಸಮಾನ ಮನಸ್ಕ ರೈತರ ಸಂಘಟಿತ ಹೋರಾಟದಿಂದಾಗಿ ಯೋಜನೆ ಜಾರಿಯಾಯಿತು. ನಂತರ ತಾಲ್ಲೂಕಿನ ವಿವಿಧ ರೈತ ಸಂಘಟನೆ ಹಾಗೂ ವಿವಿಧ ಸಂಘ, ಸಂಸ್ಥೆ, ಮಠಾಧೀಶರ ನಿರಂತರ ಹೋರಾಟದ ಪ್ರತಿಫಲದಿಂದ ಈವರೆಗೆ ೨೬ ಕೆರೆಗಳಲ್ಲಿ ಕೇವಲ ನಾಲ್ಕೈದು ಕೆರೆಗಳಿಗೆ ನೀರು ಬಂದಿದೆ. ನವಿಲೆ, ದಬ್ಬೆಗಟ್ಟ, ಚಿಕ್ಕನಾಯಕನಹಳ್ಳಿ ಕೆರೆಗಳಿಗೆ ನೀರು ಹರಿಯಬೇಕೆಂಬ ನವಿಲೆ ಹಾಗೂ ಸುತ್ತಮುತ್ತ ಗ್ರಾಮದ ರೈತರ ಛಲದ ಹೋರಾಟಕ್ಕೆ ಮನ್ನಣೆ ದೊರೆತು ಕೆಲಸ ನಡೆದಿದೆ, ಆದರೆ ನಮ್ಮ ಗುರಿ ಎಲ್ಲಾ ೨೬ ಕೆರೆಗಳಿಗೆ ನೀರು ಹರಿಯಲೇಬೇಕೆಂಬುದಾಗಿದೆ ಎಂದರು.
ರೈತರ ಹೋರಾಟದಲ್ಲಿ ರಾಜಕೀಯ ಬೆರೆಸದೆ, ಒಮ್ಮತದಿಂದ ಒಗ್ಗಟ್ಟಾಗಿ ಮುನ್ನಡೆದಾಗ ಯಶಸ್ಸು ದೊರೆಯಲಿದೆ ಎಂದ ಅವರು, ಅಧಿಕಾರಿ ವರ್ಗ ಮಾತು ಕೊಟ್ಟಂತೆ ನಿಗದಿತ ಸಮಯಕ್ಕೆ ನವಿಲೆ ಭಾಗಕ್ಕೆ ನೀರು ಹರಿಸದಿದ್ದರೆ ತಾಲ್ಲೂಕು ಬಂದ್‌ಗೆ ಕರೆ ನೀಡಲಾಗುವುದು ಎಂದರು.
ಕೆಆರ್‌ಎಸ್ ಪಕ್ಷದ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ನ್ಯಾಯಯುತ ಹಕ್ಕುಗಳನ್ನು ಸಕಾಲಕ್ಕೆ ಜನರಿಗೆ ತಲುಪಿಸುವ ಹೊಣೆಗಾರಿಕೆ ಕಾರ್ಯಾಂಗ ಮತ್ತು ಶಾಸಕಾಂಗಕ್ಕಿರಬೇಕಿದ್ದರೂ ರೈತರು ನಮ್ಮ ಉಳಿವಿಗಾಗಿ ಹೋರಾಡುವ ಸ್ಥಿತಿ ಬಂದಿದೆ ಎಂದರು.
ರೈತ ಮುಖಂಡ ಹಾಗೂ ವಕೀಲ ರಮೇಶ್ ಮಾತನಾಡಿ, ಕೃಷಿ, ತೋಟಗಾರಿಕೆ ಬೆಸ್ಕಾಂ ಹಾಗೂ ರೇಷ್ಮೆ ಇಲಾಖೆಯಡಿ ರೈತರಿಗೆ ದೊರೆಯಬೇಕಾದ ಸವಲತ್ತುಗಳು ಸಮರ್ಪಕವಾಗಿ ರೈತರಿಗೆ ತಲುಪುವಲ್ಲಿ ಸಂಘಟನೆ ನೆರವಾಗಬೇಕಿದೆ ಎಂದರು.
ಎಎಸ್‌ಪಿ ರವೀಶ್ ಮಾತನಾಡಿ, ನಾನು ರೈತನಾಗಿ ಇಲ್ಲಿಗೆ ಬಂದಿದ್ದು, ಬೀಜ, ಗೊಬ್ಬರವೂ ಸೇರಿದಂತೆ ರೈತರೇ ಎಲ್ಲವನ್ನೂ ಸ್ವಂತವಾಗಿ ಪೋಷಿಸಿ ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕಿದೆ ಎಂದರು.
ರೈತ ಹೋರಾಟ ಸಮಿತಿಯ ಸಂಘಟಕ ಶ್ಯಾವಿಗೆಹಳ್ಳಿ ಮಧು ಮಾತನಾಡಿ, ನಮ್ಮ ಹೋರಾಟ ನಿರಂತರವಾಗಬೇಕಿದೆ, ತಾಲ್ಲೂಕಿನಲ್ಲಿ ಮೂರು ನೀರಾವರಿ ಯೋಜನೆ ನಡೆದಿದೆ, ಅದರ ಸಂಪೂರ್ಣ ಫಲ ದೊರೆಯುವಲ್ಲಿ ಸಮಿತಿ ಸ್ರಮಿಸಲಿದೆ. ನಮ್ಮ ಆದ್ಯೆತೆಗಳನ್ನು ನಾವು ನ್ಯಾಯಯುತವಾಗಿ ಪಡೆಯಲು ಸಮಿತಿ ಸಿದ್ದವಿದೆ. ನಮ್ಮ ರೈತರಿಗೆ ಬೆಳೆಗಳ ಆಯ್ಕೆ, ಬೆಳೆಯುವ ಬಗ್ಗೆ ತರಬೇತಿಗಳನ್ನು ಸಮಿತಿ ನಡೆಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರಿಗೆ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಟೋ ಸಂಘದ ಮಂಜುನಾಥ್, ರೈತ ಸಂಘದ ಮುಖಂಡ ಹೊಸಳ್ಳಿ ಚಂದ್ರಣ್ಣ, ಯದುಕುಮಾರ್, ಸಾವಸೆಟ್ಟಿಹಳ್ಳಿ ಸ್ವಾಮಿ, ರಾಮಲಿಂಗಸ್ವಾಮಿ, ಯೋಗೀಶ್, ರಮೇಶ್, ವೃಷಭೇಂದ್ರ ಮತ್ತಿತರರು ಭಾಗವಹಿಸಿದ್ದರು.





























