
ಚಿಕ್ಕನಾಯಕನಹಳ್ಳಿ, ಜೂ. ೧೩- ನಮ್ಮ ಕ್ಷೇತ್ರದ ಮಕ್ಕಳಿಗಾಗಿ ಮನೆಯಲ್ಲಿ ಒಬ್ಬರು ಉತ್ತಮ ಸ್ಥಾನಕ್ಕೆ ಹೋಗಲಿ ಎಂಬ ಉದ್ದೇಶದಿಂದ ಸಮಾಜದ ಸಮಾನ ಮನಸ್ಕರು ಸೇರಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ನೀಟ್ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಕುರಿತಂತೆ ಮಾಹಿತಿ ನೀಡಿ ಮಾತನಾಡಿದ ಅವರು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಕ್ಷೇತ್ರದ ಮಕ್ಕಳ ಭವಿಷ್ಯಕ್ಕಾಗಿ ಏರ್ಪಡಿಸಿರುವಂತಹ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಜ್ಞಾನಕಲ್ಪ ಸಿಇಟಿ, ನೀಟ್, ಜೆಇಇ ತರಬೇತಿಯಲ್ಲಿ ಈ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಹೆಚ್ಚು ಮಂದಿ ಆಯ್ಕೆಯಾಗಲಿದ್ದಾರೆ ಎಂದರು.
ಕಳೆದ ಬಾರಿ ೩೧೩ ವಿದ್ಯಾರ್ಥಿಗಳಲ್ಲಿ ಇಂಜಿನಿಯರಿಂಗ್‌ಗೆ ೪೯, ಬಿಎಸ್ಸಿ ನರ್ಸಿಂಗ್ ಗೆ ೨೯, ಬಿ.ಎಸ್ಸಿ ಅಗ್ರಿಕಲ್ಚರ್‌ಗೆ ೩, ಬಿ.ಫಾರ್ಮಸಿಗೆ ೭, ಬಿಎಸ್ಸಿ ಅನಸ್ರೇಷಿಯಾಗೆ ೨ , ಬಿಎಸ್ಸಿ ಎಎಸ್‌ಎಸ್‌ಗೆ ೧ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಆದರೆ ಈ ಬಾರಿ ಇನ್ನು ಹೆಚ್ಚಿನ ಅಂದರೆ ಈ ಬಾರಿ ಒಟ್ಟು ೪೨೧ ಜನ ವಿದ್ಯಾರ್ಥಿಗಳಲ್ಲಿ ೭೫ ಜನ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ರ್‍ಯಾಂಕಿಂಗ್ ಪಡೆದುಕೊಂಡಿದ್ದಾರೆ ಅದರಲ್ಲಿ ೫೦ ಸಾವಿರದೊಳಗೆ ೨೧ ಜನರಿದ್ದು, ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ೧೫ ಜನ ವಿದ್ಯಾರ್ಥಿಗಳು ಅತ್ಯುತ್ತಮ ರ್‍ಯಾಂಕಿಂಗ್ ಪಡೆದುಕೊಂಡಿದ್ದಾರೆ. ಇದೇ ರೀತಿ ಈ ಬಾರಿ ನರ್ಸಿಂಗ್, ಅನಸ್ತೇಷಿಯಾ ಸೇರಿದಂತೆ ಇತರೆ ಕೋರ್ಸ್‌ಗಳಿಗೆ ಆಯ್ಕೆಯಾಗುವ ನಿರೀಕ್ಷೆ ಇದ್ದು ಈ ತರಬೇತಿಯನ್ನು ನಾವು ಯಾವುದೇ ಸ್ವಾರ್ಥವಿಲ್ಲದೆ ನೀಡಲಾಗುತ್ತಿದ್ದು ಕಳೆದ ವರ್ಷದಿಂದ ಪ್ರಥಮ ಪಿಯುಸಿಯಿಂದಲೂ ತರಬೇತಿ ನೀಡುತ್ತಿದ್ದು ಇದರಿಂದ ಈ ಬಾರಿಯ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈ ಬಾರಿ ಇನ್ನು ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಂತ್ರಿಕ, ವೃತ್ತಿಪರ ಕೋರ್ಸ್‌ಗಳಿಗೆ ಹೋಗುವ ಸಾಧ್ಯತೆ ಇದೆ ಎಂದ ಅವರು, ಇದರೊಂದಿಗೆ ಬಿ.ಕಾಂ, ಬಿ.ಎ ವಿದ್ಯಾರ್ಥಿಗಳಿಗೂ ಎಸ್‌ಡಿಎ, ಎಫ್‌ಡಿಎ, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಉಚಿತ ಸಿಇಟಿ ನೀಟ್ ತರಬೇತಿ ಸಮಿತಿಯ ಅದ್ಯಕ್ಷ ನಾಗರಾಜು, ಸದಸ್ಯರುಗಳಾದ ಸೋಮಶೇಖರ್, ಜಾಕೀರ್, ಎಂ.ಎಸ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.




























