Home ಜಿಲ್ಲೆ ಕಲಬುರಗಿ ಸಂಕಷ್ಟದಲ್ಲಿ ಜನರು, ಸಂಭ್ರಮದಲ್ಲಿ ಸರ್ಕಾರ: ದೇವೀಂದ್ರ ದೇಸಾಯಿ ಕಲ್ಲೂರ ಆಕ್ರೋಶ

ಸಂಕಷ್ಟದಲ್ಲಿ ಜನರು, ಸಂಭ್ರಮದಲ್ಲಿ ಸರ್ಕಾರ: ದೇವೀಂದ್ರ ದೇಸಾಯಿ ಕಲ್ಲೂರ ಆಕ್ರೋಶ

ಕಲಬುರಗಿ: ರಾಜ್ಯದ ಹಲವು ಭಾಗಗಳಲ್ಲಿ ಬರದ ಛಾಯೆ ಆವರಿಸಿ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ 100 ದಿನಗಳ ಸಂಭ್ರಮಾಚರಣೆ ನಡೆಸುತ್ತಿರುವುದು ಎಷ್ಟು ಸಮಂಜಸ ಎಂದು ಬಿಜೆಪಿ ಒಬಿಸಿ ಮೋರ್ಚಾ ಕಲಬುರಗಿ ನಗರಾಧ್ಯಕ್ಷ ದೇವೀಂದ್ರ ದೇಸಾಯಿ ಕಲ್ಲೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಶತದಿನೋತ್ಸವದ ಹೆಸರಿನಲ್ಲಿ ಭರ್ಜರಿ ಕಾರ್ಯಕ್ರಮಗಳು, ವೇದಿಕೆ, ವಿದ್ಯುತ್ ದೀಪಾಲಂಕಾರ ಹಾಗೂ ಪ್ರಚಾರಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಆದರೆ ರಾಜ್ಯದ ಜನರ ಬದುಕಿನಲ್ಲಿ 100 ದಿನಗಳಲ್ಲಿ ಯಾವ ಬದಲಾವಣೆ ತಂದಿದ್ದೀರಿ ಎಂಬುದನ್ನು ಮೊದಲು ಜನರ ಮುಂದೆ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಸಂಕಷ್ಟ, ಉದ್ಯೋಗದ ಕೊರತೆ, ಬೆಲೆ ಏರಿಕೆ ಹಾಗೂ ಜನಸಾಮಾನ್ಯರ ಸಮಸ್ಯೆಗಳು ಮುಂದುವರಿದಿರುವಾಗ ಸರ್ಕಾರ ಸಂಭ್ರಮಾಚರಣೆ ನಡೆಸುತ್ತಿರುವುದು ಜನರ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.
ಸರ್ಕಾರ ಘೋಷಿಸಿರುವ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಹಾಗೂ ಗೃಹಜ್ಯೋತಿ ಸೇರಿದಂತೆ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಆದರೆ ಯೋಜನೆಗಳ ಘೋಷಣೆ ಮತ್ತು ಪ್ರಚಾರ ಮಾತ್ರ ಸರ್ಕಾರದ ಸಾಧನೆಯಾಗಬಾರದು. ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ನಿರುದ್ಯೋಗಿ ಯುವಕರು ಹಾಗೂ ಬಡವರ ಬದುಕಿನಲ್ಲಿ ಶಾಶ್ವತ ಬದಲಾವಣೆ ತರಲು ಉದ್ಯೋಗ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕ್ರಮ ಅಗತ್ಯ ಎಂದು ಹೇಳಿದ್ದಾರೆ.
ಯುವನಿಧಿ ಯೋಜನೆಯ ಹಣ ಹಲವು ಅರ್ಹ ಯುವಕರಿಗೆ ವಿಳಂಬವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣವೂ ಕೆವೈಸಿ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಜನರು ತಮ್ಮ ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ನಿರ್ವಹಣೆಯಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲೆ ಒತ್ತಡ ಉಂಟಾಗಿದೆ ಎಂಬ ಚರ್ಚೆಗಳು ನಡೆಯುತ್ತಿರುವಾಗ, ಶತದಿನೋತ್ಸವದ ಹೆಸರಿನಲ್ಲಿ ದೊಡ್ಡ ಮಟ್ಟದ ಖರ್ಚು ಮಾಡುವ ಬದಲು ಆ ಹಣವನ್ನು ಬರ ಪರಿಹಾರ, ರೈತರ ನೆರವು ಹಾಗೂ ಜನರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಬಳಸಬೇಕಿತ್ತು ಎಂದು ದೇವೀಂದ್ರ ದೇಸಾಯಿ ಕಲ್ಲೂರ ಹೇಳಿದ್ದಾರೆ.
“ಸಂಭ್ರಮ ಮಾಡಿಕೊಳ್ಳುವುದು ಸರ್ಕಾರದ ಹಕ್ಕು. ಆದರೆ ಜನರ ತೆರಿಗೆ ಹಣ ಬಳಸುವಾಗ 100 ದಿನಗಳಲ್ಲಿ ಏನು ಸಾಧನೆ ಮಾಡಲಾಗಿದೆ ಎಂಬುದರ ಸ್ಪಷ್ಟ ಲೆಕ್ಕವನ್ನು ಜನರ ಮುಂದೆ ಇಡುವುದು ಸರ್ಕಾರದ ಕರ್ತವ್ಯ. ಪ್ರಚಾರದ ಆಡಳಿತವಲ್ಲ, ಪರಿಣಾಮಕಾರಿ ಆಡಳಿತ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“ಮೊದಲು ರೈತರಿಗೆ ಬರ ಪರಿಹಾರ ನೀಡಿ, ಗ್ಯಾರಂಟಿ ಯೋಜನೆಗಳ ಬಾಕಿ ಹಣ ಬಿಡುಗಡೆ ಮಾಡಿ, ಯುವಕರಿಗೆ ಉದ್ಯೋಗ ಸೃಷ್ಟಿಸಿ ಹಾಗೂ ಬಡವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ. ನಂತರ ಸಾಧನೆಯ ಸಂಭ್ರಮ ಆಚರಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.