Home ಜಿಲ್ಲೆ ರೈತರ ಕಲ್ಯಾಣಕ್ಕಾಗಿ ನಾಳೆ ಪಾದಯಾತ್ರೆ

ರೈತರ ಕಲ್ಯಾಣಕ್ಕಾಗಿ ನಾಳೆ ಪಾದಯಾತ್ರೆ

ಯಾದಗಿರಿ: ಶ್ರಾವಣ ಮಾಸದ ಬೆನಕನ ಅಮಾವಾಸ್ಯೆ ಅಂಗವಾಗಿ ಡಾ. ಭೀಮಣ್ಣ ಮೇಟಿ ಅಭಿಮಾನಿ ಬಳಗದ ವತಿಯಿಂದ ರೈತರ ಕಲ್ಯಾಣಕ್ಕಾಗಿ ಸೆ. ೧೧ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸದಸ್ಯ ಬೀರೇಶ್ ಚಿರತೆನೋರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. ೧೧ರಂದು ಬೆಳಿಗ್ಗೆ ೯ಕ್ಕೆ ನಗರದ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನದಿಂದ ತಾಲೂಕಿನ ಮೈಲಾಪೂರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.
ಮೈಲಾಪೂರದಲ್ಲಿ ಶ್ರೀ ಬನ್ನಿ ಮಹಾಕಾಳಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಗ್ರಾಮದ ೧೦೧ ಮುತ್ತೈದೆಯರಿಗೆ ಉಡಿ ತುಂಬಲಾಗುವುದು. ಕಾರ್ಯಕ್ರಮಕ್ಕೆ ಆರಂಭದಲ್ಲಿ ನೇಗಿಲಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುವುದು ಎಂದರು.
ಶ್ರೀ ಮುರುಘಾರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ವಿಶ್ವರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಡಾ. ಭೀಮಣ್ಣ ಮೇಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಲಾಪೂರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಪೀಠಾಧಿಪತಿ ಶರಣಪ್ಪ ಪೂಜಾರಿ, ಹಳಿಗೇರಾದ ನಾಗಪ್ಪ ಪೂಜಾರಿ ಹಾಗೂ ಗಿರಿಮಲ್ಲಪ್ಪ ಪೂಜಾರಿ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಪಾದಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ರಾಜಕೀಯ ಮುಖಂಡರು ಹಾಗೂ ಧುರೀಣರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶೇಕ್ ಇಮ್ರಾನ್, ಬೆಂಜಮಿನ್ ಶಿವನೂರ, ಖಾಜಾ ಪಟೇಲ್ ದೋರನಹಳ್ಳಿ, ಸೀಮೆನ್ ಅಬ್ಬೆತುಮಕೂರ, ಸುರೇಶ ಹಾಲಗೇರಾ, ಮಲ್ಲಿಕಾರ್ಜುನ ಮೈಲಾಪೂರ, ನಾಗಪ್ಪ ಮೈಲಾಪೂರ, ಮರೆಪ್ಪ ಸುಣಗಾರ ಹಾಗೂ ಕೃಷ್ಣಾ ಭಜಂತ್ರಿ ಉಪಸ್ಥಿತರಿದ್ದರು.