
ಯಾದಗಿರಿ: ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಟಿಪ್ಪರ್‍ಗೆ ಬೆಂಕಿ ಹಚ್ಚುವ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿರುವ ಯಾದಗಿರಿ ಜಿಲ್ಲಾ ಟಿಪ್ಪರ್ ಮಾಲೀಕರ ಸಂಘ, ಶಾಸಕರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ಇಲ್ಲದಿದ್ದರೆ ಅಕ್ಟೋಬರ್ 12ರಂದು ಸುಮಾರು 200 ಟಿಪ್ಪರ್‍ಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಮೇಗೌಡ ಬೀರನಕಲ್, ಜನಪ್ರತಿನಿಧಿಗಳ ಅಧಿಕಾರ ಜನರ ಸೇವೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಇರಬೇಕೇ ಹೊರತು, ಜನರಲ್ಲಿ ಆತಂಕ ಮೂಡಿಸುವುದಕ್ಕಾಗಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮರಳು ಸಾಗಣೆ ಹಾಗೂ ಓವರ್‍ಲೋಡ್ ಟಿಪ್ಪರ್‍ಗಳ ಸಂಚಾರದ ಕುರಿತು ದೂರುಗಳಿದ್ದರೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಿ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ನಿಯಮಾನುಸಾರ ವಾಹನಗಳನ್ನು ಜಪ್ತಿ ಮಾಡುವುದಕ್ಕೂ ಸಂಘದ ವಿರೋಧವಿಲ್ಲ. ಆದರೆ ಟಿಪ್ಪರ್‍ಗಳಿಗೆ ಬೆಂಕಿ ಹಚ್ಚುವ ರೀತಿಯ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.
ಶಾಸಕರು ಸಂವಿಧಾನಬದ್ಧ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಸಾರ್ವಜನಿಕ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಬೇಕು. ಅಧಿಕಾರಿಗಳ ಸಮ್ಮುಖದಲ್ಲಿ ಇಂತಹ ಹೇಳಿಕೆಗಳು ವ್ಯಕ್ತವಾದರೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.
ಟಿಪ್ಪರ್‍ಗಳ ಮೇಲೆ ಅವಲಂಬಿತವಾಗಿರುವ ಮಾಲೀಕರು, ಚಾಲಕರು ಹಾಗೂ ಕಾರ್ಮಿಕರ ಬದುಕಿನ ಬಗ್ಗೆಯೂ ಗಮನಹರಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಂಘದ ವಿರೋಧವಿಲ್ಲ. ಆದರೆ ಬೆದರಿಕೆಯ ಧಾಟಿಯ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಶಾಸಕರು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ, ಟಿಪ್ಪರ್ ಮಾಲೀಕರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ಶಾಸಕರು ಕ್ಷಮೆಯಾಚಿಸದಿದ್ದರೆ ಅಕ್ಟೋಬರ್ 12ರಂದು ಸುಮಾರು 200 ಟಿಪ್ಪರ್‍ಗಳನ್ನು ಒಳಗೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುನ್ನಾಳ, ಅಕ್ರಮ ಮರಳು ಸಾಗಣೆ ಹಾಗೂ ಓವರ್‍ಲೋಡ್ ಕುರಿತು ದೂರುಗಳಿದ್ದರೆ ಪೆÇಲೀಸ್, ಸಾರಿಗೆ, ಕಂದಾಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಾನೂನುಬದ್ಧ ಮಾರ್ಗ ಅನುಸರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪಿಎಸ್‍ಐ ಭೀಮರಾಯ ಬಂಕ್ಲಿಗಿ ಗಣಪುರ, ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ರಘುಪತಿ ಗೌಡಗೇರಿ, ಎಂ.ಡಿ. ಸೋಫಿ, ಮಲ್ಲಯ್ಯ ಜಲಾಲ್, ಮಲ್ಲು ಮಾಲೀಕೇರಿ, ಕಾಶಪ್ಪ, ಶಶಾಂಕ್ ನಾಲಡ್ಡಿ, ರವಿ, ಪ್ರವೀಣ್ ಕುಮಾರ್ ಮೋದಿ, ಪರಶುರಾಮ್ ನಾಯಕ್, ಕಾಶಿನಾಥ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.






















