Home ಜಿಲ್ಲೆ ನಮ್ಮದು ಅರ್ಜಿ; ವಿಶ್ವಾರಾಧ್ಯರದು ಮರ್ಜಿ: ಡಾ. ಗಂಗಾಧರ ಶಿವಾಚಾರ್ಯರು

ನಮ್ಮದು ಅರ್ಜಿ; ವಿಶ್ವಾರಾಧ್ಯರದು ಮರ್ಜಿ: ಡಾ. ಗಂಗಾಧರ ಶಿವಾಚಾರ್ಯರು

ಯಾದಗಿರಿ: ಭಕ್ತರು ತಮ್ಮ ಸಂಕಷ್ಟಗಳು, ನೋವು-ನಲಿವು ಹಾಗೂ ಇಷ್ಟಾರ್ಥಗಳನ್ನು ಶ್ರೀ ವಿಶ್ವಾರಾಧ್ಯರ ಸನ್ನಿಧಿಯಲ್ಲಿ ಅರ್ಪಿಸಿ ಒಳಿತಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಭಕ್ತರ ಪ್ರಾರ್ಥನೆಗೆ ಸ್ಪಂದಿಸಿ ಅವರ ಬದುಕಿನಲ್ಲಿ ಒಳಿತನ್ನುಂಟು ಮಾಡುವುದು, ಸಂಕಷ್ಟಗಳಿಗೆ ಪರಿಹಾರದ ದಾರಿ ತೋರಿಸುವುದು ಹಾಗೂ ಅನುಗ್ರಹ ಕರುಣಿಸುವುದು ಶ್ರೀ ವಿಶ್ವಾರಾಧ್ಯರ ಮರ್ಜಿಗೆ ಬಿಟ್ಟ ವಿಚಾರವಾಗಿದೆ ಎಂದು ಅಬ್ಬೆ ತುಮಕೂರು ಶ್ರೀ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರ ಅನುಗ್ರಹ ಕ್ಷೇತ್ರದಲ್ಲಿ ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತ ಹಮ್ಮಿಕೊಂಡಿರುವ ನಿತ್ಯ ವಿಶೇಷ ಪೂಜಾ ಕಾರ್ಯಕ್ರಮದ ೧೧ನೇ ದಿನದ ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಶ್ರೀ ವಿಶ್ವಾರಾಧ್ಯರು ಅಣಿಮಾದಿ ಅಷ್ಟಸಿದ್ಧಿಗಳನ್ನು ಸಾಧಿಸಿದ ಮಹಾನ್ ಶಿವಯೋಗಿಗಳು ಹಾಗೂ ಸಿದ್ಧಿಪುರುಷರಾಗಿದ್ದು, ತಮ್ಮ ಆಧ್ಯಾತ್ಮಿಕ ಸಾಧನೆ ಮತ್ತು ಅನುಭಾವದ ಮೂಲಕ ಜನಸಾಮಾನ್ಯರ ಬದುಕಿಗೆ ಬೆಳಕಾದ ಮಹಾತ್ಮರಾಗಿದ್ದಾರೆ. ಭಕ್ತರ ಪಾಲಿಗೆ ಅವರು ಕಾಮಧೇನು ಮತ್ತು ಕಲ್ಪವೃಕ್ಷದಂತಿದ್ದು, ನಿಷ್ಕಳಂಕ ಭಕ್ತಿ, ಶ್ರದ್ಧೆ, ನಿಷ್ಠೆ ಹಾಗೂ ವಿಶ್ವಾಸದಿಂದ ಅವರನ್ನು ಆರಾಧಿಸುವ ಭಕ್ತರ ಬದುಕಿಗೆ ಸದಾ ಕರುಣೆ ಹಾಗೂ ಆಶೀರ್ವಾದದ ನೆರಳು ನೀಡುತ್ತಾರೆ ಎಂದು ಹೇಳಿದರು. ಶ್ರಾವಣ ಮಾಸವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಅತ್ಯಂತ ಪವಿತ್ರವಾದ ಮಾಸವಾಗಿದ್ದು, ಈ ಸಂದರ್ಭದಲ್ಲಿ ದೇವರ ಆರಾಧನೆ, ಶಿವಪೂಜೆ, ವ್ರತಾಚರಣೆ, ಪುರಾಣ-ಪುಣ್ಯಕಥೆಗಳ ಶ್ರವಣ, ಸತ್ಸಂಗ ಹಾಗೂ ಮಹಾತ್ಮರ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯನ ಅಂತರAಗ ಶುದ್ಧಿಯಾಗುವುದರ ಜೊತೆಗೆ ಮನಸ್ಸಿನಲ್ಲಿ ಸಾತ್ವಿಕತೆ, ಶಾಂತಿ ಹಾಗೂ ಸದ್ಭಾವನೆಗಳು ಬೆಳೆಯುತ್ತವೆ ಎಂದರು. ಶ್ರಾವಣ ಮಾಸದಲ್ಲಿ ಭಕ್ತರು ಉಪವಾಸ, ವ್ರತ-ನಿಯಮಗಳನ್ನು ಆಚರಿಸುವುದರ ಜೊತೆಗೆ ಪುಣ್ಯಕ್ಷೇತ್ರಗಳ ದರ್ಶನ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹಾಗೂ ದೇವರ ಸ್ಮರಣೆ ಮಾಡುವ ಮೂಲಕ ತಮ್ಮ ಬದುಕನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನ ಮಾಡುತ್ತಾರೆ. ಇಂತಹ ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿರುವ ಕೋಪ, ಅಹಂಕಾರ, ಅಸೂಯೆ, ದ್ವೇಷ ಮತ್ತು ದುರ್ವಿಚಾರಗಳನ್ನು ದೂರಗೊಳಿಸಿ ಸಾತ್ವಿಕ ಸಂಪನ್ನತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ಮನುಷ್ಯನಾಗಿ ಜನಿಸಿದ ಪ್ರತಿಯೊಬ್ಬರೂ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ ತಮ್ಮ ನಡೆ-ನುಡಿ, ಆಚಾರ-ವಿಚಾರ ಹಾಗೂ ದೈನಂದಿನ ಬದುಕಿನಲ್ಲಿ ಸತ್ಯ, ಶಾಂತಿ, ಪ್ರೀತಿ, ಕರುಣೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸತ್ಸಂಗ ಹಾಗೂ ಸದ್ವಿಚಾರಗಳನ್ನು ಆಲಿಸುವುದರಿಂದ ಜ್ಞಾನ ವೃದ್ಧಿಯಾಗುತ್ತದೆ; ಆ ಜ್ಞಾನವನ್ನು ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಮಾತ್ರ ಮನುಷ್ಯ ಜನ್ಮದ ಸಾರ್ಥಕತೆ ಸಾಧ್ಯವಾಗುತ್ತದೆ ಎಂದರು. ಶ್ರಾವಣ ಮಾಸವು ಕೇವಲ ಒಂದು ತಿಂಗಳ ಆಚರಣೆಗೆ ಸೀಮಿತವಾಗಬಾರದು. ಈ ಮಾಸದಲ್ಲಿ ಪಡೆಯುವ ಧಾರ್ಮಿಕ ಚಿಂತನೆ, ಸದ್ವಿಚಾರ, ಭಕ್ತಿ ಮತ್ತು ಸತ್ಕರ್ಮದ ಪ್ರೇರಣೆ ವರ್ಷಪೂರ್ತಿ ನಮ್ಮ ಬದುಕಿನಲ್ಲಿ ಮುಂದುವರಿಯಬೇಕು. ದೇವರ ಸನ್ನಿಧಿಯಲ್ಲಿ ಕೇಳಿದ ಒಳ್ಳೆಯ ಮಾತುಗಳನ್ನು ಜೀವನದಲ್ಲಿ ಆಚರಣೆಗೆ ತಂದು, ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಭಕ್ತಿಯ ನಿಜವಾದ ಅರ್ಥ ಸಾಕಾರಗೊಳ್ಳುತ್ತದೆ ಎಂದು ಹೇಳಿದರು. ಜಾತಿ, ಮತ, ಪಂಥ, ಪಂಗಡ ಹಾಗೂ ಭೇದಭಾವಗಳನ್ನು ಮೀರಿ ಮಾನವೀಯತೆಯ ನೆಲೆಗಟ್ಟಿನ ಮೇಲೆ ಸೌಹಾರ್ದಯುತ ಹಾಗೂ ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂಬುದು ಶ್ರೀ ವಿಶ್ವಾರಾಧ್ಯರ ಆಶಯವಾಗಿತ್ತು. ಸಕಲ ಜೀವಾತ್ಮರಲ್ಲಿಯೂ ಒಂದೇ ದೈವತ್ವವನ್ನು ಕಾಣುವ ವಿಶಾಲ ಮನೋಭಾವವನ್ನು ಬೆಳೆಸಿಕೊಂಡು ಪರಸ್ಪರ ಪ್ರೀತಿ, ಸಹೋದರತ್ವ, ಸಹಬಾಳ್ವೆ ಹಾಗೂ ಮಾನವೀಯತೆಯಿಂದ ಬದುಕುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದೇ ಸೌಹಾರ್ದ ಮತ್ತು ಸಮಾನತೆಯ ಪರಂಪರೆಯನ್ನು ಶ್ರೀಮಠ ನಿರಂತರವಾಗಿ ಮುಂದುವರಿಸಿಕೊAಡು ಬರುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಬೆಳಿಗ್ಗೆ ಶ್ರೀ ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಮಹಾ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಶ್ರಾವಣ ಮಾಸದ ವಿಶೇಷ ಪೂಜಾ ಸಮಾರಂಭದಲ್ಲಿ ಯಾದಗಿರಿ ಸೇರಿದಂತೆ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ವಿಶ್ವಾರಾಧ್ಯರ ದರ್ಶನ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಗಮಿಸಿದ ಭಕ್ತರಿಗೆ ಶ್ರೀಮಠದ ವತಿಯಿಂದ ವಿಶೇಷ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶಿವಶೇಖರ ಶಿವಾಚಾರ್ಯ ಸ್ವಾಮಿಗಳು, ಡಾ. ಸುಭಾಷ್ ಚಂದ್ರ ಕೌಲಗಿ, ಬಸವರಾಜ ಶಾಸ್ತ್ರಿ ಎಲೆಕೂಡಗಿ ಸೇರಿದಂತೆ ಶ್ರೀಮಠದ ಪ್ರಮುಖರು, ಧಾರ್ಮಿಕ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.