
ಕೋಲಾರ: ಆ,೨೦-ಜಿಲ್ಲೆಯಲ್ಲಿ ಇತ್ತೀಚೆಗೆ ತಲೆದೂರಿರುವ ಕಲಬೆರಕೆ ಹಾಲು ದಂಧೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಗುಣಮಟ್ಟವಿಲ್ಲದ ಹಾಗೂ ಕಲಬೆರಕೆಯಾದ ಹಾಲನ್ನು ಖರೀದಿಸುತ್ತಿರುವ ಖಾಸಗಿ ಡೈರಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಂ.ಆರ್. ರವಿಕುಮಾರ್ ಅವರು ಖಡಕ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಖಾಸಗಿ ಡೈರಿಗಳು ಒಟ್ಟು ಸುಮಾರು ೯೩ ಸಾವಿರ ಲೀಟರ್ ಸಾಮರ್ಥ್ಯದ ಹಾಲು ಶೀತಲೀಕರಣ ಕೇಂದ್ರಗಳನ್ನು ಸ್ಥಾಪಿಸಿ, ವ್ಯಾಪಕವಾಗಿ ಹಾಲು ಸಂಗ್ರಹಣೆಯಲ್ಲಿ ತೊಡಗಿವೆ. ಆದರೆ, ಕೋಲಾರ ಹಾಲು ಒಕ್ಕೂಟ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಪೂರೈಸದ, ಕಲಬೆರಕೆಯಾದ ಅಥವಾ ಇತರೆ ಕಾರಣಗಳಿಂದ ತಿರಸ್ಕೃತಗೊಂಡ ಹಾಲನ್ನು ಈ ಖಾಸಗಿ ಸಂಸ್ಥೆಗಳು ಏಜೆಂಟರ ಮುಖಾಂತರ ಖರೀದಿಸಿ ತಮ್ಮ ಶೀತಲೀಕರಣ ಕೇಂದ್ರಗಳಿಗೆ ಸಾಗಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಈ ರೀತಿಯ ಕಲಬೆರಕೆ ಹಾಲು ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ಗ್ರಾಹಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಹಾಲಿನ ಗುಣಮಟ್ಟ ಹಾಗೂ ಸುರಕ್ಷತೆಯ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಕಳವಳವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು, ಈ ದಂಧೆಯ ವಿರುದ್ಧ ಸೂಕ್ತ ಕ್ರಮ ವಹಿಸಲು ಮುಂದಾಗಿದ್ದಾರೆ.
ಈ ಅಕ್ರಮಕ್ಕೆ ಬ್ರೇಕ್ ಹಾಕಲು ತಾಲ್ಲೂಕುವಾರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ವಾರದಲ್ಲಿ ಒಂದು ದಿನ ಖಾಸಗಿ ಡೈರಿಗಳ ಮೇಲೆ ದಿಢೀರ್ ಹಾಗೂ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲನೆ ನಡೆಸಲಿವೆ. ತಪಾಸಣೆ ನಡೆಸಿ ಸಮಗ್ರ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶಿಸಿದ್ದಾರೆ.































