
ಬೀದರ, ಏ.೨೯: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಗುದಗೆ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸಚಿನ್ ಗುದಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಉಷ್ಣಾಂಶ ಏರಿಕೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ವಿಶೇಷವಾಗಿ ಸಣ್ಣ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಬಿಸಿಲಿನ ತೀವ್ರತೆಯಿಂದ ಸನ್‌ಸ್ಟ್ರೋಕ್, ಮೂಗಿನಿಂದ ರಕ್ತಸ್ರಾವ, ರಕ್ತದೊತ್ತಡದಲ್ಲಿ ಏರುಪೇರು, ಬಾಯಾರಿಕೆ, ತಲೆಸುತ್ತು, ಸಕ್ಕರೆ ಕಾಯಿಲೆಯಲ್ಲಿ ಅಸ್ಥಿರತೆ ಹಾಗೂ ನಿಂತಲ್ಲೇ ತಲೆಸುತ್ತಿ ಕುಸಿದು ಬೀಳುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅತಿಯಾದ ಬಿಸಿಲಿನ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಸಂಚರಿಸುವುದನ್ನು ತಪ್ಪಿಸಬೇಕು. ಸಾಕಷ್ಟು ನೀರು, ಮಜ್ಜಿಗೆ, ಹಣ್ಣು ರಸ ಹಾಗೂ ದ್ರವ ಆಹಾರಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಯಾರಿಗಾದರೂ ಬಿಸಿಲಿನ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಕಂಡುಬAದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಾ. ಸಚಿನ್ ಗುದಗೆ ತಿಳಿಸಿದ್ದಾರೆ.

























