Home ಜಿಲ್ಲೆ ಮೈಸೂರು ಕೆಂಪೇಗೌಡರು ಇಡೀ ಮನುಕುಲದ ಉದ್ದಾರಕ

ಕೆಂಪೇಗೌಡರು ಇಡೀ ಮನುಕುಲದ ಉದ್ದಾರಕ

ಸಂಜೆವಾಣಿ ನ್ಯೂಸ್
ಮೈಸೂರು: ಏ.30:-
ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತವಾಗದೆ ಇಡೀ ಮನುಕುಲದ ಉದ್ದಾರಕರಾಗಿದ್ದಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


ಮೈಸೂರು ತಾಲೂಕಿನ ಲಲಿತಾದ್ರಿಪುರದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಇದೊಂದು ವಿಶೇಷ ಕಾರ್ಯಕ್ರಮ. ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದರು. ಆದರೆ, ಆಡಳಿತ ನಡೆಸುವಾಗ ಎಲ್ಲಾ ಜನಾಂಗದವರನ್ನು ಒಟ್ಟಿಗೆ ಸೇರಿಸಿಕೊಂಡು ಬೆಂಗಳೂರು ನಗರ ಕಟ್ಟಿದರು ಎಂದರು.
ಆಯಾಯ ಜನಾಂಗದ ಹೆಸರಿನಲ್ಲಿ ಬೆಂಗಳೂರಿನಾದ್ಯಂತ ಪೇಟೆಗಳನ್ನು ನಿರ್ಮಿಸಿದರು. ಪುಸ್ತಕದ ಜ್ಞಾನದ ಜತೆಗೆ ಕೌಶಲ್ಯ ಮುಖ್ಯ ಎಂಬ ಪರಿಕಲ್ಪನೆಯೊಂದಿಗೆ ಬೆಂಗಳೂರು ನಗರ ಕಟ್ಟಿದರು. ಮಾಡಿದ ಸೇವೆಗೆ ಪ್ರತಿಫಲ ಬಯಸದ ನಿಸ್ವಾರ್ಥಿ ನಾಡಪ್ರಭು ಕೆಂಪೇಗೌಡರು. ಅಗ್ರಹಾರಗಳನ್ನು ಸ್ಥಾಪಿಸಿ ಜ್ಞಾನ ಸಂಪಾದನೆಗೂ ದಾರಿ ಮಾಡಿಕೊಟ್ಟರು. ಅವರ ಆಳ್ವಿಕೆಯ ಕಾಲದಲ್ಲಿ ನಮ್ಮ ದೇಶದ ಜಿಡಿಪಿ ಜಗತ್ತಿನ 190 ದೇಶಗಳ ಪೈಕಿ ಶೇ.25ರಷ್ಟು ನಮ್ಮ ದೇಶದ ಪಾಲು ಇತ್ತು. ಕೆಂಪೇಗೌಡರ ಆಳ್ವಿಕೆ ಕಾಲದಲ್ಲಿ ಮುತ್ತು ರತ್ನಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದರು.


ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಯೊಂದು ಗ್ರಾಮದಲ್ಲೂ ಸ್ಥಾಪನೆ ಮಾಡಬೇಕು ಎಂಬುದು ನನ್ನ ಆಸೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ನಾನು ಮಾದರಿಯಾಗಿ ಇಟ್ಟುಕೊಂಡಿದ್ದೇನೆ. ಕೆಂಪೇಗೌಡರು, ಕುವೆಂಪು ಮತ್ತು ಎಚ್.ಡಿ.ದೇವೇಗೌಡರ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದರು.
ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಕೆಂಪೇಗೌಡರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದರು. ಬೆಂಗಳೂರಿನಂತಹ ಬೃಹತ್ ನಗರವನ್ನು ಅವರು ಕಟ್ಟಿದರು. ಈ ನಾಡಿಗೆ ಎಚ್.ಡಿ.ದೇವೇಗೌಡರ ಕೊಡುಗೆಯೂ ಅಪಾರ. ಕೆಂಪೇಗೌಡರ ನಂತರ ದೇವೇಗೌಡ, ಎಸ್.ಎಂಕೃಷ್ಣ, ಎಚ್.ಡಿ.ಕುಮಾರಸ್ವಾಮಿಯವರು ಅತಿ ಹೆಚ್ಚು ಕೊಡುಗೆ ನೀಡಿದ್ದಾರೆ. ಲಲಿತಾದ್ರಿಪುರ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಯಾರ ಬಳಿಯೂ ಹಣ ಕೇಳದೇ ತಾವೇ ಮುಂದೆ ಬಂದು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.


ಮುಂದಿನ ದಿನಗಳಲ್ಲಿ ಕೆಂಪೇಗೌಡರ ಶಕ್ತಿಯನ್ನು ಕುಮಾರಣ್ಣನಿಗೆ, ನಿಖಿಲ್ ಅವರಿಗೆ ಕೊಡಲಿ. ಯಾವುದೇ ಅಧಿಕಾರ ಇಲ್ಲದಿದ್ದರೂ ನಿಖಿಲ್ ರಾಜ್ಯದಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಲಿತಾದ್ರಿಪುರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತೇವೆಂದು ಭರವಸೆ ನೀಡಿದರು.


ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಶ್ರೀಧರ್, ಎಸ್‍ಬಿಎಂ ಮಂಜು, ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಸೇರಿದಂತೆ ಸ್ಥಳೀಯ ಜೆಡಿಎಸ್ ನಾಯಕರು ಇದ್ದರು.