Home ಜಿಲ್ಲೆ ಮೈಸೂರು ಸಂಸ್ಕೃತಿಯ ಮಾದರಿಗಳು ನಾಶವಾಗುವ ಅಪಾಯ

ಸಂಸ್ಕೃತಿಯ ಮಾದರಿಗಳು ನಾಶವಾಗುವ ಅಪಾಯ

ಸಂಜೆವಾಣಿ ನ್ಯೂಸ್
ಮೈಸೂರು: ಏ.30:-
ಒಂದು ಸಮುದಾಯದ ಸಂಸ್ಕೃತಿಯ ಜೀವಂತ ಮಾದರಿಗಳು ನಾಶವಾಗುವ ಅಪಾಯ ಇದೆ. ಅದನ್ನು ಪರಿಚಯಿಸುವ ತುರ್ತು ಇದೆ. ಆ ತುರ್ತನ್ನು ದೇವನೂರು ಮಹಾದೇವ ಅವರು ಸವಾಲಾಗಿ ಸ್ವೀಕರಿಸಿ ತಣ್ಣಗೆ ಅಭಿವ್ಯಕ್ತಿಸುವ ರೀತಿ ಅನನ್ಯ ಎಂದು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಪದ್ಮಶೇಖರ್ ಹೇಳಿದರು.


ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಹಿತ್ಯ ಸಹವಾಸದ ಕಾರ್ಯಕ್ರಮದ ಅಂಗವಾಗಿ ಹಿರಿಯ ಸಾಹಿತಿಗಳಾದ ತ್ರಿವೇಣಿ, ಕೆ.ಎಸ್.ನರಸಿಂಹಸ್ವಾಮಿ ಮತ್ತು ದೇವನೂರು ಮಹಾದೇವ ಅವರ ಕೊಡುಗೆಗಳ ಕುರಿತ ಸಾಹಿತ್ಯದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಇವತ್ತಿನ ಹೊತ್ತಿನಲ್ಲಿಯೂ ಅದನ್ನು ಬಳಸುವ ದಾರಿಯಲ್ಲಿ ವಿವಿಧ ಸ್ವರೂಪದಲ್ಲಿ ಜೀವಂತವಾಗಿಸಿರುವ, ಶೋಧಿಸುವ ಕೆಲಸವನ್ನು ದೇವನೂರು ಮಹಾದೇವ ಮಾಡಿಕೊಂಡು ಬರುತ್ತಿದ್ದಾರೆ. ಅಕ್ಷರ ಕಲಿತ ತಳ ಸಮುದಾಯದ ಮಕ್ಕಳು ತಮ್ಮ ಸಮುದಾಯಗಳಿಗೆ ಬಿಡುಗಡೆಗೊಳ್ಳಲು ಬಯಸಬೇಕಾದ ಎಚ್ಚರದ ಬಗ್ಗೆ ನಿರ್ದೇಶನ ಕೊಟ್ಟಿದ್ದಾರೆ ಎಂದು ತಿಳಿಸಿದರು.


ದೇವನೂರು ಮಹಾದೇವ ಬರೆದಿದ್ದು ಕಡಿಮೆ. ಆದರೂ ಅವೆಲ್ಲವೂ ಸಾಹಿತ್ಯ ಲೋಕದಲ್ಲಿ ವಾದ, ವಿವಾದ, ಚರ್ಚೆಗೆ ಆಹ್ವಾನಿಸಿತ್ತೆಂದರೆ ಆಯಾ ಕಾಲಘಟ್ಟದಲ್ಲಿ ಓದಿದವರಿಗೆ ಹಾಗೂ ಇದ್ದವರಿಗೆ ಅದು ಅರ್ಥವಾಗುತ್ತದೆ. ಶತ ಶತಮಾನಗಳಿಂದ ದಲಿತರ ಸಂಕಷ್ಟಗಳಿಗೆ ಧ್ವನಿಯಾಗುವ ದೇವನೂರು ಮಹಾದೇವ ಅವರು ಶೋಷಿತ ವರ್ಗದ ನೋವು, ಮಾನ, ಅಪಮಾನ ಹಾಗೂ ಸಂಕಟಗಳನ್ನು ತಾತ್ವಿಕ ಗ್ರಹಿಕೆಯಾಗಿಸಿಕೊಂಡು ಅಭಿವ್ಯಕ್ತಿ ಕೊಡುತ್ತಿದ್ದಾರೆ ಎಂದರು.


ಶೋಷಣೆಯ ಮೂಲ ಗ್ರಹಿಸುತ್ತಲೆ ತನ್ನ ಸಮುದಾಯದ ಬದುಕಿಗೆ ತಾನೇ ಸಾಕ್ಷಿ ಪ್ರಜ್ಞೆಯಾಗಿ ಮುಖಾಮುಖಿಯಾಗುತ್ತಾ ಅವಮಾನದ ಕ್ಷಣಗಳನ್ನು ಸದ್ದಿಲ್ಲದೆ ದಾಖಲಿಸುತ್ತಾರೆ. ದಲಿತ ಸಂಸ್ಕೃತಿಯ ಸೂಕ್ಷ್ಮ ಭಾವಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ ಎಂದು ಹೇಳಿದರು.
ಕೆಎಸ್‍ಎನ್ ಅವರು ಪ್ರೀತಿಯನ್ನು ಹೂ ಮತ್ತು ಉಸಿರಿಗೆ ಪರ್ಯಾಯವಾಗಿಸುತ್ತಾರೆ. ಕಾರಣ ಇವರೆಡರಲ್ಲೂ ಆದ್ರತೆಯ ಗುಣ ಸಹಜವಾಗಿರುತ್ತದೆ. ಆದ್ದರಿಂದ ಅವರು ಪ್ರೀತಿಯನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸುತ್ತಾರೆ. ಬದುಕಿನ ಸ್ಥಾಯಿಭಾವವಾಗಿ ಗ್ರಹಿಸುತ್ತಾರೆ. ಹೀಗಾಗಿ ಸಾಂಸಾರಿಕ ಚೌಕಟ್ಟಿನ ಒಳಗೆ ಹೆಚ್ಚು ವಿವರಿಸುತ್ತಾರೆ. ಮುಗ್ಧ, ಮನೋಹರ, ಮಾದಕ, ಮುಂತಾದ ಭಾವದ ಕಚಗುಳಿ ಇಡುವಂತಹ ಕವಿತೆಗಳನ್ನು ಬರೆಯುತ್ತಾರೆ ಎಂದರು.


ಕೆಎಸ್‍ಎನ್ ಅವರ ಪ್ರೇಮಗೀತೆಗಳನ್ನು ಓದುತ್ತಾ ಹೋದರೆ ಒಂದು ರೀತಿಯ ಖಷಿ, ನಿರಾಳತೆಯ ಭಾವ ಅನುಭÀವಕ್ಕೆ ಬರುತ್ತದೆ. ನಿತ್ಯ ಬದುಕಿನ ಸಾಮಾನ್ಯ ಸಣ್ಣ ಸಣ್ಣ ಸಂಗತಿಗಳಿಗೂ ಒಂದು ಕಲಾತ್ಮಕ ರೂಪ ನೀಡುವುದು ಅದ್ಬುತವೆನಿಸುತ್ತದೆ. ಹೆಣ್ಣಿನ ಜೀವಿತದ ಈ ಮಧುರ ಕ್ಷಣಗಳಿಗೆ ಒಂದು ಕಲಾತ್ಮಕ ಉಡುಗೆ ತೊಡಿಸಿರುವುದು ಅನನ್ಯವಾದದ್ದು. ಬಾಳಿನ ನೋವು, ನಲಿವು ಸಿಟ್ಟು ಸೆಡವು ಸೇರಿದಂತೆ ಇತ್ಯಾದಿ ಭಾವಗಳಿಗೆ ಕೆಎಸ್‍ಎನ್ ಅವರಷ್ಟು ನವಿರಾಗಿ ಸ್ಪಂದಿಸಿದ ಕವಿ ಮತ್ತೊಬ್ಬರಿಲ್ಲ ಎಂದು ಹೇಳಿದರು.


ಸಾಹಿತಿ ತ್ರಿವೇಣಿ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಎಚ್ಚೆತ್ತ ತಿಳುವಳಿಕೆಯಲ್ಲಿ ಕಥೆ, ಕಾದಂಬರಿ ಬರೆಯುತ್ತಾರೆ. ಮನಃಶಾಸ್ತ್ರೀಯ ನೆಲೆಯಲ್ಲಿ ಒಂದು ಹೆಣ್ಣಿನ ಒಳನೋಟಗಳನ್ನು, ವ್ಯಕ್ತಿಗತ ಅಪೇಕ್ಷೆಗಳನ್ನು ಸಾಮಾಜಿಕ, ಸಾಂಸಾರಿಕ ತುಮುಲ, ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಉದ್ದೇಶ ಪೂರ್ವಕವಾಗಿ ವರ್ತಮಾನಗಳ ಆಗುಹೋಗುಗಳ ಬಗ್ಗೆ ಬರೆದಿದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್ ಮುಖ್ಯ ಸಂವಹನಾಧಿಕಾರಿ ಸುದೀಶ್ ವೆಂಕಟೇಶ್, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ವಿಮರ್ಶಕರು ಮತ್ತು ಪ್ರಾಧ್ಯಾಪಕಿ ಡಾ.ಎಂ.ಎಸ್.ಆಶಾದೇವಿ, ಕನ್ನಡ ಕುವೆಂಪು ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪೆÇ್ರ.ಎನ್.ಕೆ.ಲೋಲಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.