Home ಮುಖಪುಟ ಸುದ್ದಿ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ: ಡಿಕೆಶಿ

ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ: ಡಿಕೆಶಿ

ಬೆಂಗಳೂರು, ಆ. ೧೪- ನನಗೆ ಯಾರ ಮೇಲೂ ದ್ವೇಷವಾಗಲೀ, ಅಸೂಯೆಯಾಗಲಿ, ಹೊಟ್ಟೆ ಉರಿಯಾಗಲಿ ಇಲ್ಲ. ಸದನದ ಎಲ್ಲ ೨೨೪ ಶಾಸಕರು ನನಗೆ ಒಂದೇ. ಎಲ್ಲರೂ ಒಟ್ಟಾಗಿ ಟೀಂ ಕರ್ನಾಟಕವಾಗಿ ಹೃದಯ ಶ್ರೀಮಂತಿಕೆಯಿಂದ ಜನಪರ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ವಿಧಾನಸಭೆಯಲ್ಲಿಂದು ಸದನಕ್ಕೆ ನೂತನ ಸಚಿವರನ್ನು ಪರಿಚಯಿಸುವ ಕಲಾಪ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಜನಪ್ರತಿನಿಧಿಗಳಿಗೆ ಬೇಧ ಭಾವ ಮಾಡಲ್ಲ. ರಾಜಕಾರಣ ಬೇರೆ. ರಾಜ್ಯದ ಪ್ರಗತಿ ವಿಚಾರ ಬಂದಾಗ ನಾವೆಲ್ಲಾ ಒಟ್ಟಾಗಿರೋಣ. ಹಳೆಯದನ್ನು ಮರೆತು ಒಗ್ಗೂಡಿ ಕೆಲಸ ಮಾಡೋಣ ಎಂದು ಅವರು ಹೇಳಿದರು.


೧೩೯ ಶಾಸಕರ ಬೆಂಬಲದಿಂದ ಪಕ್ಷದ ವರಿಷ್ಠರ ತೀರ್ಮಾನದಿಂದ ನಾನು ಮುಖ್ಯಮಂತ್ರಿಯಾಗಿ ನಿಯುಕ್ತಿಗೊಂಡಿದ್ದೇನೆ. ಕಳೆದ ಮೂರು ವರ್ಷಗಳಿಂದ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನನಗೂ ನನ್ನದೆ ಆದ ಹೊಸ ಆಲೋಚನೆ, ಹೊಸ ಭರವಸೆ, ಹೊಸ ನಂಬಿಕೆಗಳು ಇವೆ. ಜನರ ವಿಶ್ವಾಸವನ್ನು ಗೆಲ್ಲಲು ಟೀಂ ಕರ್ನಾಟಕವಾಗಿ ಇಡೀ ಸದನದ ಎಲ್ಲ ಶಾಸಕರ ಜತೆ ಕೆಲಸ ಮಾಡುತ್ತೇನೆ. ರಾಜಕಾರಣ ಬೇರೆ. ಜನರ ಅಭಿವೃದ್ಧಿಗೆ ನಾವೆಲ್ಲಾ ಕೆಲಸ ಮಾಡೋಣ ಎಂದು ಹೇಳಿದರು


ನನಗೆ ಎಲ್ಲ ಪಕ್ಷದವರೂ ಒಂದೆ. ಈ ಸ್ತಾನದಲ್ಲಿ ಕುಳಿತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಆಸೆ ಹೊಂದಿದ್ದೇನೆ. ಈ ಸ್ಥಾನದಲ್ಲಿ ಕುಳಿತ ಎಲ್ಲ ಮಹನೀಯರ ಸೇವೆ, ಕೊಡುಗೆಗಳನ್ನು ನಾನು ಸ್ಮರಿಸುತ್ತೇನೆ ಎಂದು ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಎಲ್ಲ ಹೆಸರನ್ನು ಡಿ.ಕೆ. ಶಿವಕುಮಾರ್ ಸದನದಲ್ಲಿ ಉಲ್ಲೇಖಿಸಿದರು.


ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ಹೃದಯ ಶ್ರೀಮಂತಿಕೆಯನ್ನು ನೆನಪಿಸಿಕೊಂಡ ಡಿ.ಕೆ. ಶಿವಕುಮಾರ್, ರಾಜ್ಯದ ಜ್ವಲಂತ ಸಮಸ್ಯೆಗಳಿವೆ. ಎಲ್ಲರೂ ಒಗ್ಗೂಡಿ ಜನರ ಕೆಲಸ ಮಾಡೋಣ. ನನಗೆ ಯಾವುದೇ ಹಾರ್ಟ್ ಬರ್ನಿಂಗ್ ಇಲ್ಲ. ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಇಷ್ಟವೂ ಇಲ್ಲ ಎಂದು ಹೇಳಿದರು.
ಯಾವುದೂ ಶಾಶ್ವತ ಅಲ್ಲ. ನಾವು ಅಧಿಕಾರದಲ್ಲಿದ್ದಾಗ ಜನ ಹಿತಕ್ಕಾಗಿ ಏನು ಮಾಡುತ್ತೇವೆ ಎಂಬುದು ಮುಖ್ಯ. ರಾಜ್ಯ ಮುಖ್ಯಮಂತ್ರಿಯಾದವರು ಅವರದೇ ಆದ ಕೊಡುಗೆಗಗಳನ್ನು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು


ನಾವೆಲ್ಲಾ ಹಳೆಯದನ್ನು ಮರೆಯೋಣ. ಹಳೆ ಚರಿತ್ರೆಗಳನ್ನು ಮರೆತು ರಾಜ್ಯದ ಅಭಿವೃದ್ಧಿಗೆ ಒಂದಾಗೋಣ. ಇಲ್ಲಿರುವ ಎಲ್ಲ ಶಾಸಕರು ಹಾಗೆಯೇ ಕೇಂದ್ರದಲ್ಲಿರುವ ಸಚಿವರುಗಳು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಹಳ ನೆರವು ನೀಡಿದ್ದಾರೆ. ಹಾಗೆಯೇ, ಕೇಂದ್ರದಲ್ಲಿ ಸಚಿವರಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ದೊಡ್ಡ ಖಾತೆ ಹೊಂದಿದ್ದಾರೆ. ಅವರು ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಒದಗಿಸಲು ಉದ್ಯಮಗಳನ್ನು ಆರಂಭಿಸಿದರೆ ಅದಕ್ಕೆ ಜಾಗ ಕೊಡಲು ನಾನು ಸಿದ್ಧನಿದ್ದೇನೆ. ಒಟ್ಟಾಗಿ ಹೋಗುವುದಷ್ಟೇ ನನ್ನ ಆಶಯ ಎಂದು ಹೇಳಿದರು.


ರಾಜ್ಯದ ಅಭಿವೃದ್ಧಿಗೆ ಟೀಂ ಕರ್ನಾಟಕವಾಗಿ ಒಗ್ಗಟ್ಟಾಗಿ ಹೋಗುವ ಸಂದೇಶವನ್ನು ಈ ಸದನದ ಮೂಲಕ ನೀಡೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿ, ತಮ್ಮ ಸಂಪುಟದ ಎಲ್ಲ ಸಚಿವರನ್ನು ಸದನಕ್ಕೆ ಪರಿಚಯಿಸಿದರು.