ಕಲಬುರಗಿ,ಮೇ ೧- ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಇನ್ನು ತೀರ್ಮಾನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೋ ಇಲ್ಲವೋ ಎಂಬುದನ್ನು ಈಗ ಹೇಗೆ ಹೇಳಲಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲ್ಬುರ್ಗಿಯಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆಗೆ ಇನ್ನು ಸಮಯ ನಿಗದಿಯಾಗಿಲ್ಲ. ಸಿಎಂ ಬದಲಾವಣೆ ಕುರಿತು ಚರ್ಚಿಸಲು ದಿನಾಂಕವೂ ನಿಗದಿಯಾಗಿಲ್ಲ. ಇದೆಲ್ಲಾ ನಿಗದಿಯಾದ ಮೇಲೆ ಏನು ನಿರ್ಧಾರ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದರು.
ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಆಗುತ್ತಾ ಎಂದು ಕೇಳಿದರೆ ನಾನೇನು ಹೇಳಲಿ. ಈಗ ಸಿಎಂ ಬದಲಾವಣೆ ಆಗುತ್ತಾ ಆಗಲ್ಲವಾ ಎಂಬುದನ್ನು ಹೇಗೆ ಹೇಳಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಬದಲಾವಣೆಗೆ ಸಮಯ ನಿಗದಿಯಾದ ಮೇಲೆ ನಾವೆಲ್ಲ ಅಂದರೆ ನಾನು, ಸೋನಿಯಾಗಾಂಧಿಯವರು, ರಾಹುಲ್ ಗಾಂಧಿಯವರು ಸೇರಿ ಚರ್ಚೆ ಮಾಡುತ್ತೇವೆ. ಯಾವ ನಿರ್ಧಾರ ಕೈಗೊಂಡರೆ ಪಕ್ಷಕ್ಕೆ ಒಳ್ಳೇಯದು ಯಾವ ನಿರ್ಧಾರ ಕೈಗೊಂಡರೆ ಪಕ್ಷದ ಮೇಲೆ ಯಾವ ರೀತಿ ಪರಿಣಾಮವಾಗಲಿದೆ ಎಂಬೆಲ್ಲಾ ಬಗ್ಗೆ ಚರ್ಚಿಸಿಯೇ ರಾಜ್ಯದ ಹಿತವನ್ನು ಗಮನದಲ್ಲಿಟ್ಟು ಕೊಂಡು ತೀರ್ಮಾನ ಮಾಡುತ್ತೇವೆ ಅದನ್ನು ಎಲ್ಲರೂ ಬೆಂಬಲಿಸಬೇಕು ಎಂದರು. ಈಗ ಮುಖ್ಯಮಂತ್ರಿ ಬದಲಾವಣೆಗೆ ಇನ್ನು ಸಮಯ ನಿಗದಿಯಾಗಿಲ್ಲ. ಮಾಧ್ಯಮದವರು ಪದೇ ಪದೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಪ್ರಶ್ನೆ ಕೇಳಿದರೆ ನಾನು ಉತ್ತರ ಕೊಡಲು ಆಗಲ್ಲ. ಸುಮ್ಮನೆ ಊಹಾಪೋಹ ಪ್ರಶ್ನೆಗಳು ಬೇಡ ಎಂದರು.
ನಿನ್ನೆ ಸಹಾ ಎಐಸಿಸಿ ಅಧ್ಯಕ್ಷರು ಮುಖ್ಯಮಂತ್ರಿ ಬದಲಾವಣೆಗೆ ಇನ್ನು ಕಾಲ ಬಂದಿಲ್ಲ ಎಂದು ಹೇಳುವ ಮೂಲಕ ಮೇ ಎರಡನೇ ವಾರದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತೇವೆ ಎಂಬ ವರದಿಗಳನ್ನು ತಳ್ಳಿಹಾಕಿದರು. ಇಂದು ಸಹಾ ನಾಯಕತ್ವ ಬದಲಾವಣೆ ಬಗ್ಗೆ ಖರ್ಗೆಯವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಬುದ್ಧ ಸದಾ ಪ್ರಸ್ತುತ
ಬುದ್ಧ ಜಯಂತಿ ಸಂದರ್ಭದಲ್ಲಿ ಮಾತನಾಡಿದ ಅವರು ಬುದ್ಧನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಬುದ್ಧನ ಅಷ್ಟಾಂಗ ಮಾರ್ಗಗಳು ಜನರಿಗೆ ಪ್ರೇರಣೆಯಾಗಿವೆ.
ಪ್ರಪಂಚದಲ್ಲಿ ನಡೆಯುತ್ತಿರುವ ಯದ್ಧ ನಿಲ್ಲಬೇಕು, ಎರಡು ದೇಶಗಳ ನಡುವಿನ ಕಲಹ ನೂರಾರು ದೇಶಗಳಿಗೆ ಸಮಸ್ಯೆಯಾಗಿದೆ. ಪಂಡಿತ್ ಜವಾಹರಲಾಲ್ ನೆಹರು ಅವರಂತೆ ವಿದೇಶ ನೀತಿ ಪಾಲನೆ ಮಾಡಿದರೆ ಉಳಿಯುತ್ತೇವೆ. ನಾವು ಯಾವ ದೇಶದ ಪರ ಸಹ ನಿಲ್ಲಬಾರದು. ಇದನ್ನು ದೇಶದ ಪ್ರಧಾನಿ ಅರ್ಥಮಾಡಿಕೊಳ್ಳಬೇಕು. ಒಂದು ದೇಶ, ಒಬ್ಬ ವ್ಯಕ್ತಿಯ ಪರ ನಿಲ್ಲಬಾರದು ಎಂದು ಖರ್ಗೆ ಹೇಳಿದರು.
ದರ ಏರಿಕೆ ಆಕ್ರೋಶ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ೯೯೩ ರೂಪಾಯಿಗೆ ಏರಿಕೆ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಎಲ್ ಪಿಜಿ ಸಿಲಿಂಡರ್ ಕೊರತೆಯಿಂದ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ನಡುವೆ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಮತ್ತಷ್ಟು ಹೊರೆ ಹೇರಿದೆ ಎಂದರು.

























