Home ಜಿಲ್ಲೆ ಗಡೆಸೂಗೂರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಲ್ಲ: ಗ್ರಾಮಸ್ಥರ ಪರದಾಟ

ಗಡೆಸೂಗೂರು ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಲ್ಲ: ಗ್ರಾಮಸ್ಥರ ಪರದಾಟ

ಯಾದಗಿರಿ: ಹಾಲಿಗೆರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗಡೆಸೂಗೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ವಿಶೇಷವಾಗಿ ೧ನೇ ವಾರ್ಡ್ನ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಯಾದಗಿರಿ ಜಿಲ್ಲಾ ಅಧ್ಯಕ್ಷ ಸಾಬಣ್ಣ ಬಸವಂತಪುರ ಆರೋಪಿಸಿದ್ದಾರೆ.
ಗ್ರಾಮಕ್ಕೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಕ್ಕದ ಹಲಗೇರಾ ಗ್ರಾಮಕ್ಕೆ ತೆರಳಿ ನೀರು ತರುವಂತಾಗಿದೆ. ಇನ್ನೂ ಕೆಲವರು ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಭೀಮಾ ನದಿಯಿಂದ ನೀರು ತರುವ ಪರಿಸ್ಥಿತಿ ಎದುರಾಗಿದೆ. ಗ್ರಾಮದಲ್ಲಿರುವ ಬೀದಿ ಕೊಳವೆಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಗ್ರಾಮಸ್ಥರು ಪ್ರತಿದಿನ ನೀರಿಗಾಗಿ ದೂರದ ಪ್ರದೇಶಗಳಿಗೆ ತೆರಳಬೇಕಾಗಿದ್ದು, ಇದರಿಂದ ದಿನನಿತ್ಯದ ಕೆಲಸಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನು ೨ನೇ ವಾರ್ಡ್ ಸೇರಿದಂತೆ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಕೊಳಚೆ ನೀರು ರಸ್ತೆ ಬದಿಯಲ್ಲಿ ನಿಂತು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಹಾಗೂ ಚರಂಡಿ ನೀರು ಸರಾಗವಾಗಿ ಹರಿದುಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕುಡಿಯುವ ನೀರು ಹಾಗೂ ಚರಂಡಿ ಸಮಸ್ಯೆ ಕುರಿತು ಹಲವು ಬಾರಿ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೂಡಲೇ ಹಾಲಿಗೆರಾ ಗ್ರಾಮ ಪಂಚಾಯಿತಿ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಗಡೆಸೂಗೂರು ಗ್ರಾಮಕ್ಕೆ ಭೇಟಿ ನೀಡಿ, ಕುಡಿಯುವ ನೀರು ಮತ್ತು ಕೊಳಚೆ ನೀರಿನ ಸಮಸ್ಯೆಯನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಮಸ್ಯೆ ಬಗೆಹರಿಸಲು ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಸಾಬಣ್ಣ ಬಸವಂತಪುರ ಎಚ್ಚರಿಕೆ ನೀಡಿದ್ದಾರೆ.