Home ಜಿಲ್ಲೆ ವಾರ್ಡ್ 31ರಲ್ಲಿ 20 ಲಕ್ಷ ವೆಚ್ಚದ ನೂತನ ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ

ವಾರ್ಡ್ 31ರಲ್ಲಿ 20 ಲಕ್ಷ ವೆಚ್ಚದ ನೂತನ ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ

ಯಾದಗಿರಿ: ನಗರದಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಅದರ ಭಾಗವಾಗಿ ವಾರ್ಡ್ ಸಂಖ್ಯೆ 31ರ ಶಶಿಧರ ಕಾಲೋನಿಯಲ್ಲಿ ನಿರ್ಮಿಸಲಾದ ನೂತನ ಸಾರ್ವಜನಿಕ ಶೌಚಾಲಯವನ್ನು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಸೋಮವಾರ ಉದ್ಘಾಟಿಸಿದರು.

ನಗರಸಭೆಯ ವತಿಯಿಂದ ನಗರೋತ್ಥಾನ ಹಂತ-3 ಯೋಜನೆಯಡಿ ಸುಮಾರು ?20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಶೌಚಾಲಯ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಆಡಳಿತದ ಪ್ರಮುಖ ಆದ್ಯತೆಯಾಗಿದೆ. ನಗರಕ್ಕೆ ವಿವಿಧ ಭಾಗಗಳಿಂದ ಆಗಮಿಸುವ ನಾಗರಿಕರು ಹಾಗೂ ಪ್ರಯಾಣಿಕರು ಶೌಚಾಲಯದ ಕೊರತೆಯಿಂದ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ನಿರ್ಮಾಣಗೊಂಡಿರುವ ಶೌಚಾಲಯಗಳನ್ನು ಸಾರ್ವಜನಿಕರು ಜವಾಬ್ದಾರಿಯಿಂದ ಬಳಸುವ ಜೊತೆಗೆ ಅವುಗಳ ಸ್ವಚ್ಛತೆ ಮತ್ತು ನಿರ್ವಹಣೆಯನ್ನು ನಗರಸಭೆ ಸಮರ್ಪಕವಾಗಿ ಕೈಗೊಳ್ಳಬೇಕು. ಉತ್ತಮ ನಿರ್ವಹಣೆಯ ಮೂಲಕ ಸಾರ್ವಜನಿಕ ಆಸ್ತಿಯನ್ನು ದೀರ್ಘಕಾಲ ಸಂರಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.

ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ ಮಾತನಾಡಿ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದ್ದು, ಶುದ್ಧ ನೀರಿನ ಪೂರೈಕೆಗಾಗಿ ಬೋರ್‍ವೆಲ್ ಅಳವಡಿಸಲಾಗಿದೆ. ಜೊತೆಗೆ ಪ್ರತ್ಯೇಕ ಮೂತ್ರಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುಡಿಎ ಅಧ್ಯಕ್ಷ ಬಾಬುರಾವ ಕಾಡ್ಲೂರ್, ನಗರಸಭೆ ಸಿಬ್ಬಂದಿಗಳಾದ ಪ್ರಶಾಂತ, ಶಂಭುಲಿಂಗ, ನಾಗರಾಜ್, ಶರಣಮ್ಮ, ಮಂಜುನಾಥ, ಅರುಣ ಹಾಗೂ ವಾರ್ಡ್‍ನ ಸಾರ್ವಜನಿಕರು ಉಪಸ್ಥಿತರಿದ್ದರು.