Home ಮುಖಪುಟ ಸುದ್ದಿ ನೀಟ್ ಸೋರಿಕೆ : ತನಿಖೆಗೆ ಬಿಕೆ ಎಚ್ ಆಗ್ರಹ

ನೀಟ್ ಸೋರಿಕೆ : ತನಿಖೆಗೆ ಬಿಕೆ ಎಚ್ ಆಗ್ರಹ

ಬೆಂಗಳೂರು,ಜು. ೧೯- ದೇಶಾದ್ಯಂತ ಸರಣಿಯಾಗಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ವಿದ್ಯಾರ್ಥಿ ವಲಯದಲ್ಲಿ ತೀವ್ರ ಆತಂಕ ಮೂಡಿಸಿದ್ದು,ಈ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ರಾಷ್ಟ್ರೀಯ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.


ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್,ಪ್ರಶ್ನೆ ಪತ್ರಿಕೆ ಸೋರಿಕೆಯ ಎಲ್ಲಾ ಪ್ರಕರಣಗಳಲ್ಲಿ ಬಿಜೆಪಿ ನಾಯಕರ ಮಕ್ಕಳೇ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.


ಎಲ್ಲೆಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆಯೋ ಅಲ್ಲೆಲ್ಲಾ ಬಿಜೆಪಿ ಸರ್ಕಾರವಿದೆ.ಅಲ್ಲದೆ, ಪ್ರಶ್ನೆ ಪತ್ರಿಕೆ ಸೋರಿಕೆ ಯಲ್ಲಿ ಭಾಗಿಯಾದವರ ಮೇಲೆ ಯಾವರೀತಿ ಕ್ರಮ ತೆಗೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.


೨೦೧೪ರಿಂದ ಇಂದಿನವರೆಗೆ ದೇಶದಲ್ಲಿ ಸುಮಾರು ೧೦೨ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಇಂತಹ ಹಗರಣಗಳು ಹೆಚ್ಚಾಗಿ ನಡೆಯುತ್ತಿವೆ. ಈ ಹಗರಣಗಳ ನೇರ ಫಲಾನುಭವಿಗಳು ಬಿಜೆಪಿ ನಾಯಕರ ಮಕ್ಕಳೇ ಹೊರತು ಬಡ ವಿದ್ಯಾರ್ಥಿಗಳಲ್ಲ ಎಂದು ಗಂಭೀರ ಆರೋಪ ಮಾಡಿದ ಅವರು,ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ವಿದ್ಯಾರ್ಥಿ ಮೇಲೆ ಅಲ್ಲ,ಅವರ ಕುಟುಂಬದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ದೇಶದ ವಿದ್ಯಾರ್ಥಿ ಸಮೂಹ ಆತಂಕದಲ್ಲಿದ್ದು, ಇದು ಶಿಕ್ಷಣ ಕ್ಷೇತ್ರದ ಮೇಲೆ ದೊಡ್ಡ ದಾಳಿ ಆಗಿರುವುದು ಆತಂಕದ ವಿಚಾರವಾಗಿದೆ.ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುತ್ತಿದ್ದರೂ ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಜೊತೆ ಬಂದು ಮುಖಾಮುಖಿ ಚರ್ಚೆ ನಡೆಸುತ್ತಿಲ್ಲ. ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.


ಕರ್ನಾಟಕದಲ್ಲಿ ಈ ಹಿಂದೆ ತಾವು ನೇಮಕಾತಿ ಹಗರಣಗಳ ವಿರುದ್ಧ ಪ್ರತಿಭಟನೆ ನಡೆಸಿದಾಗ ಸರ್ಕಾರಗಳು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದವು. ಆದರೆ ಇತ್ತೀಚೆಗೆ ಹೈಕೋರ್ಟ್ ಆ ಪ್ರಕರಣಗಳನ್ನು ರದ್ದುಗೊಳಿಸಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ಸರ್ಕಾರ ನಿಲ್ಲಿಸಬೇಕು. ಪ್ರಶ್ನೆ ಪತ್ರಿಕೆ ಹಗರಣಗಳ ವಿರುದ್ಧ ಕರ್ನಾಟಕದಲ್ಲೂ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ರಾಹುಲ್ ಗಾಂಧಿಗೆ ರಾಜ್ಯಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.