
ಸೈದಾಪುರ:ನಾಗಲಾಪುರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಸಿಸಿ ರಸ್ತೆ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯಲ್ಲೇ ನಿಂತು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಡೆಂಗಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಕಂಡು ಬರುತ್ತಿದ್ದೂ ಕೂಡಲೇ ಸಂಬಂದಿಸಿದವರು ಸಮಸ್ಯೆ ಬಗೆಹರಿಸದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಎಚ್ಚರಿಕೆ ನೀಡಿದರು.
ಗ್ರಾಮಸ್ಥರೊಂದಿಗೆ ಸಮಸ್ಯೆಗಳನ್ನು ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗ್ರಾಮದ ಹಲವೆಡೆ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ಹಾಗೂ ಕೊಳಚೆ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿದೆ. ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೆರೆದ ಬಾವಿ, ಕಲುಷಿತ ನೀರು, ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳು ಹಾಗೂ ಮಹಿಳೆಯರಿಗೆ ಸಮರ್ಪಕ ಶೌಚಾಲಯದ ಕೊರತೆಯೂ ಗ್ರಾಮಸ್ಥರನ್ನು ಕಾಡುತ್ತಿದೆ. ಗ್ರಾಮದ ಮೂಲಸೌಕರ್ಯ ಹಾಗೂ ಸ್ವಚ್ಛತೆ ಸಮಸ್ಯೆಗಳ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣ ಸ್ವಚ್ಛತಾ ಕಾರ್ಯ ಕೈಗೊಂಡು, ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಾಲದಂಡಪ್ಪ, ಮಲ್ಲಿಕಾರ್ಜುನ ದಂದರ್, ಮಲ್ಲಯ್ಯ, ಮಾದೇವಪ್ಪ, ಭೀಮರಾಯ, ಬನ್ನಪ್ಪ, ಚಂದ್ರು, ಮಲ್ಲಪ್ಪ ಚಲಮನಿ, ಶಂಕ್ರಪ್ಪ ಚಲಮನೆ, ಸಾಬಣ್ಣ ಪಲ್ಮೇನ, ಹಣಮಂತರಾಯ, ದೇವೇಂದ್ರಪ್ಪ, ಹನುಮಂತ ಪೆಟ್ಲ್, ನರಸಪ್ಪ, ಬುಡ್ಡಪ್ಪ, ಹನುಮಂತ, ಹೊನ್ನಪ್ಪ, ಮಲ್ಲಪ್ಪ ಚೆಲುಮೆನ್, ಮಲ್ಲಿಕಾರ್ಜುನ, ಮೋನಪ್ಪ ಪಲ್ಮಾನ್, ಬಸಪ್ಪ, ರಾಮಪ್ಪ, ರಾಚಪ್ಪ ಅಂಗಡಿ, ಕೃಷ್ಣ, ಮಹೇಶ್, ತಿಮ್ಮ, ಬುಗ್ಗಪ್ಪ, ಈರಪ್ಪನೂರ್, ಜಗದೀಶ ಚಲಮನಿ, ಈರಪ್ಪ ಚಲಮನಿ, ಭೀಮಪ್ಪ ಡಿಜೆ, ರವಿ, ಮಲ್ಲಪ್ಪ ಪಲ್ಮಾನ್, ಮಲ್ಲರೆಡ್ಡಿ, ಸಿದ್ದಪ್ಪನವರ್, ಮಲ್ಲಪ್ಪ ಅಶವನೂರ್, ಭೀಮಪ್ಪ ಕಟ್ಟೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.





























