
ಯಾದಗಿರಿ: ಜಿಲ್ಲೆಯ ಸಾಮಾಜಿಕ ಹೋರಾಟಗಾರ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಉಮೇಶ್ ಕೆ. ಮುದ್ನಾಳ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಆರ್.ಡಿ. ನಗರದಲ್ಲಿರುವ ನಮ್ಮದು ಅಖಂಡ ಕರ್ನಾಟಕ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಪ್ರತಿಷ್ಠಿತ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಾಮಾಜಿಕ ನ್ಯಾಯ, ಜನರ ಸಮಸ್ಯೆಗಳ ಪರಿಹಾರ, ಸಾರ್ವಜನಿಕ ಹಿತಾಸಕ್ತಿ ಹಾಗೂ ವಿವಿಧ ಜನಪರ ಹೋರಾಟಗಳಲ್ಲಿ ಉಮೇಶ್ ಕೆ. ಮುದ್ನಾಳ್ ಅವರು ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅವರ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನು ಗುರುತಿಸಿ ಪ್ರತಿಷ್ಠಾನವು ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಮೇಶ್ ಮುದ್ನಾಳ್ ಅವರ ಸಾಮಾಜಿಕ ಸೇವೆ ಇದೇ ರೀತಿ ಮುಂದುವರಿಯಲಿ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಅವರು ಆಶಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಆಡಳಿತದ ಗಮನ ಸೆಳೆಯುವುದು ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ನಡೆಸುತ್ತಿರುವ ಉಮೇಶ್ ಕೆ. ಮುದ್ನಾಳ್ ಅವರಿಗೆ ಈ ಹಿಂದೆಯೂ ಹಲವು ಸಂಘ-ಸAಸ್ಥೆಗಳಿAದ ಪ್ರಶಸ್ತಿ, ಗೌರವ ಹಾಗೂ ಸನ್ಮಾನಗಳು ದೊರೆತಿವೆ.
ಗಿರಿನಾಡಿನ ಅಭಿವೃದ್ಧಿ ಹಾಗೂ ಜನರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಉಮೇಶ್ ಮುದ್ನಾಳ್ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಜನಪರ ಸೇವೆಯನ್ನು ಗುರುತಿಸಿ ಇನ್ನಷ್ಟು ಪ್ರಶಸ್ತಿಗಳು ಅವರ ಮುಡಿಗೇರಲಿ ಎಂದು ಸಾರ್ವಜನಿಕರು ಆಶಿಸಿದರು.





























