
ಸಂಜೆ ವಾಣಿ ವಾರ್ತೆ |
ಜಮಖಂಡಿ: ನಗರದ ಮುತ್ತಿನಕಂತಿ ಮಠದ ಸಭಾಭವನದಲ್ಲಿ ಗಜಾನನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗಣೇಶೋತ್ಸವದ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಶ್ರೀ ಗಜಾನನ ಮಹಾಮಂಡಳದ ಗೌರವಾಧ್ಯಕ್ಷ ಮುತ್ತಿನಕಂತಿ ಶ್ರೀಗಳು ಮಾತನಾಡಿ, ಪ್ರತಿವರ್ಷ ಗಣೇಶೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಯಾವುದೇ ಶುಭ ಸಮಾರಂಭಕ್ಕೂ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಗಣೇಶೋತ್ಸವವನ್ನು ಕೇವಲ ಆಡಂಬರಕ್ಕೆ ಸೀಮಿತಗೊಳಿಸದೆ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಬೇಕು ಎಂದು ಕರೆ ನೀಡಿದರು.
ಗಣೇಶೋತ್ಸವದ ಸಂದರ್ಭದಲ್ಲಿ ಮೆರವಣಿಗೆ ಹಾಗೂ ವಿಸರ್ಜನೆಯನ್ನು ಶಾಂತಿಯುತವಾಗಿ ನಡೆಸಬೇಕು. ಪ್ರತಿನಿತ್ಯ ಗಣೇಶನಿಗೆ ಪೂಜೆ ಸಲ್ಲಿಸಬೇಕು. ಅಶ್ಲೀಲ ಹಾಡುಗಳನ್ನು ಹಾಕುವುದನ್ನು ತಪ್ಪಿಸಬೇಕು. ಇಂತಹ ಆಚರಣೆಗಳು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿದ್ದು, ಭಕ್ತಿ ಭಾವದಿಂದ ಹಬ್ಬ ಆಚರಿಸಬೇಕು. ಪರಿಸರ, ವಾಯು ಹಾಗೂ ಜಲ ಮಾಲಿನ್ಯ ಉಂಟಾಗದAತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥಾಪಕ ಅಧ್ಯಕ್ಷ ರಾಕೇಶ ಲಾಡ ಮಾತನಾಡಿ, ನಗರದ ಮೂರು ಕಡೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಂಡಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರದೀಪ ಮೆಟ್ಟಗುಡ್ಡ, ಮಹಾಮಂಡಳ ಅಧ್ಯಕ್ಷ ಹೀರಾ ಜಾಧವ, ಶಂಕರ ಕಾಳೆ, ಶ್ರೀಧರ್ ಕಂಬಿ ಸೇರಿದಂತೆ ಗಣೇಶೋತ್ಸವ ಸಮಿತಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.































