ಯಾದಗಿರಿ:ಜು.೧೩:ರಾಯಚೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೈಯದ್ ಯಾಸಿನ್ ಅವರ ನಿಧನದ ಹಿನ್ನೆಲೆಯಲ್ಲಿ ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಅವರು ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ದಿವಂಗತ ನಾಯಕನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದ ಅವರು, ಕುಟುಂಬದ ಸದಸ್ಯರು ಹಾಗೂ ಬಂಧು-ಬಳಗದವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಸಂಸದ ಜಿ ಕುಮಾರ ನಾಯಕ, ಸೈಯದ್ ಯಾಸಿನ್ ಅವರು ಜನಪರ ಕಾಳಜಿ ಹೊಂದಿದ ಸರಳ ಹಾಗೂ ಸೇವಾ ಮನೋಭಾವದ ನಾಯಕರಾಗಿದ್ದು, ಸಾರ್ವಜನಿಕ ಜೀವನದಲ್ಲಿ ಸಲ್ಲಿಸಿದ ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಹೇಳಿದರು. ಅವರ ಅಗಲಿಕೆ ರಾಯಚೂರು ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ದಿವಂಗತ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎನ್.ಎಸ್. ಬೋಸರಾಜು, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಜಯಂತರಾವ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಮಾಜಿ ಶಾಸಕ ಸೈಯದ್ ಯಾಸಿನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.





























