
ಯಾದಗಿರಿ: ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ ಹಾಗೂ ಕೆವೈಸಿ ಮಾಡಿಸಿಕೊಳ್ಳಲು ತಹಶೀಲ್ದಾರ್ ಕಚೇರಿಗೆ ಬಂದಿದ್ದ ಜನರಿಂದ ‘ನಾನು ಅಧಿಕಾರಿ’ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ತಲಾ ೧೦೦ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ರೇಷನ್ ಕಾರ್ಡ್ ಕೆವೈಸಿ ಮಾಡಿಸಿಕೊಡುತ್ತೇನೆ. ಪ್ರತಿ ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ೧೦೦ ನೀಡಬೇಕು ಎಂದು ಹೇಳಿ ೪೦ಕ್ಕೂ ಹೆಚ್ಚು ಮಂದಿಯಿAದ ಹಣ ಪಡೆದಿದ್ದಾನೆ ಎನ್ನಲಾಗಿದೆ. ಹಣ ಪಡೆದ ಬಳಿಕ ಪ್ರತಿಯೊಬ್ಬರಿಗೂ ಖಾಲಿ ಟೋಕನ್ ನೀಡಿ, ‘ಕೆಲಸ ಮಾಡಿಸಿಕೊಡುತ್ತೇನೆ’ ಎಂದು ನಂಬಿಸಿ ಅಲ್ಲಿಂದ ತೆರಳಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದೂರದ ಗ್ರಾಮಗಳಿಂದ ಕೆವೈಸಿ ಮಾಡಿಸಿಕೊಳ್ಳಲು ಬಂದಿದ್ದ ಜನರು ವ್ಯಕ್ತಿಯನ್ನು ಅಧಿಕಾರಿ ಎಂದು ನಂಬಿ ಹಣ ನೀಡಿದ್ದಾರೆ. ಆದರೆ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದ ಬಳಿಕ, ಕೆವೈಸಿ ಅಥವಾ ಆಧಾರ್ ಅಪ್‌ಡೇಟ್‌ಗಾಗಿ ಯಾವುದೇ ಹಣ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದಾಗ ತಾವು ಮೋಸ ಹೋಗಿರುವುದು ಜನರಿಗೆ ಗೊತ್ತಾಗಿದೆ.
ಈ ವೇಳೆ ಹಣ ಪಡೆದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹಲವು ದಿನಗಳಿಂದ ಸರ್ವರ್ ಸಮಸ್ಯೆಯಿಂದ ರೇಷನ್ ಕಾರ್ಡ್ ಕೆವೈಸಿ ಮಾಡಿಸಿಕೊಳ್ಳಲು ಕಚೇರಿಗಳಿಗೆ ಅಲೆದಾಡುತ್ತಿದ್ದ ಜನರು, ಈ ವ್ಯಕ್ತಿಯ ಮಾತನ್ನು ನಂಬಿ ಹಣ ನೀಡಿರುವುದಾಗಿ ತಿಳಿಸಿದ್ದಾರೆ.
‘ಮೊದಲೇ ಮಳೆ ಇಲ್ಲದೆ ಸಂಕಷ್ಟದಲ್ಲಿದ್ದೇವೆ. ಯಾದಗಿರಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಬರದ ಪರಿಸ್ಥಿತಿಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮಿಂದ ಹಣ ಪಡೆದು ಟೋಕನ್ ನೀಡಿ ವಂಚಿಸಲಾಗಿದೆ. ಹಣ ಪಡೆದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಂದೆಡೆ ರೇಷನ್ ಕಾರ್ಡ್ ಕೆವೈಸಿ ಮಾಡಿಸಲು ಸರ್ವರ್ ಸಮಸ್ಯೆ, ಮತ್ತೊಂದೆಡೆ ಕಚೇರಿ ಆವರಣದಲ್ಲೇ ನಕಲಿ ಅಧಿಕಾರಿ ಎಂದು ಆರೋಪಿಸಲಾದ ವ್ಯಕ್ತಿಯಿಂದ ಜನರಿಗೆ ವಂಚನೆ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಹಶೀಲ್ದಾರ್ ಕಚೇರಿ ಆವರಣದಲ್ಲಿಯೇ ಈ ಘಟನೆ ನಡೆದಿರುವುದರಿಂದ, ಹೊರಗಿನ ವ್ಯಕ್ತಿಯೊಬ್ಬರು ಸಾರ್ವಜನಿಕರಿಂದ ಹಣ ವಸೂಲಿ ಮಾಡುವವರೆಗೆ ಸಂಬAಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ಇರಲಿಲ್ಲವೇ? ಕಚೇರಿ ಆವರಣದಲ್ಲಿ ಇಂತಹ ಘಟನೆ ನಡೆಯದಂತೆ ಮೇಲ್ವಿಚಾರಣೆ ಏಕೆ ಇರಲಿಲ್ಲ ಎಂಬ ಪ್ರಶ್ನೆಗಳೂ ಸಾರ್ವಜನಿಕರಲ್ಲಿ ಮೂಡಿವೆ.
ಘಟನೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ, ಹಣ ಪಡೆದ ವ್ಯಕ್ತಿಯನ್ನು ಪತ್ತೆಹಚ್ಚಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ರೇಷನ್ ಕಾರ್ಡ್ ಕೆವೈಸಿ ಹಾಗೂ ಆಧಾರ್ ಅಪ್‌ಡೇಟ್‌ಗಾಗಿ ಸಾರ್ವಜನಿಕರಿಂದ ಯಾವುದೇ ಹಣ ಪಡೆಯದಂತೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





























