
ಚಿಂಚೋಳಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆ ಚಿಂಚೋಳಿ ವತಿಯಿಂದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಶಾಸಕರಾದ ಡಾ. ಅವಿನಾಶ ಜಾಧವ ಅವರು ಸಸಿಗೆ ನೀರೆರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ವತಿಯಿಂದ ಪ್ರಾರಂಭವಾಗಿರುವ ಪ್ರಜಾ ಸೇವಾ ಆಂದೋಲನವು ಮುಖ್ಯಮಂತ್ರಿಗಳ ಹೊಸ ಯೋಜನೆಯಾಗಿದ್ದು, ಇದು ಕೇವಲ ಫೆÇೀಟೋಶೂಟ್‍ಗೆ ಸೀಮಿತವಾಗದೇ, ಬಡ ಜನರ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಾಗಬೇಕು ಎಂದು ಹೇಳಿದರು. ಎಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಗಂಭೀರವಾಗಿ ತೆಗೆದುಕೊಂಡು ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಈ ಕಾರ್ಯಕ್ರಮ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದದ್ದಲ್ಲ, ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಅಧಿಕಾರಿಗಳು ಸರ್ಕಾರದ ಸೇವಕರಾಗಿ ಪಕ್ಷಭೇದವಿಲ್ಲದೆ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಬಗ್ಗೆ ಮುಂದಿನ ಮೂರನೇ ಶನಿವಾರ ನಡೆಯುವ ಸಭೆಯಲ್ಲಿ ಪರಿಹರಿಸಿದ ಸಮಸ್ಯೆಗಳ ವಿವರವನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಜನರು ಕೂಡ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ತಮ್ಮ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರರಾದ ಸುಬ್ಬಣ್ಣ ಜಮಖಂಡಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಕುಮಾರ ಚವ್ಹಾಣ, ಪುರಸಭೆ ಮುಖ್ಯ ಅಧಿಕಾರಿ ಕಾಶಿನಾಥ ಧನ್ನಿ, ಸಿಪಿಐ ಕಪಿಲ್ ದೇವ, ಅಶೋಕ್ ಕುಲಕರ್ಣಿ, ಸಂಜೀವ ಕುಮಾರ ಚವ್ಹಾಣ, ರಾಹುಲ್ ಪಂಚಶೀಲ, ಡಾ. ಲತೀಫ್, ಜಯಪ್ಪ ಚಾಪಲ, ಅಶೋಕ ಹೂವಿನಬಾವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






























