
ಯಾದಗಿರಿ: ತಾಲೂಕಿನ ಆಶನಾಳ ಗ್ರಾಮದ ಆಶನಾಳ ಗೇಟ್ ಸಮೀಪದ ಅರಣ್ಯ ಪ್ರದೇಶದಲ್ಲಿರುವ ‘ಶ್ರೀ ಭಾಗ್ಯವಂತಿ ಮಠ’ದಲ್ಲಿ ೧೬ ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಪತ್ತೆಯಾಗಿದ್ದು, ಆಕೆಯನ್ನು ಹಲವು ವರ್ಷಗಳಿಂದ ಅಲ್ಲಿ ಇರಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಬಂದ ದೂರಿನ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸರು ಜಂಟಿಯಾಗಿ ದಿಢೀರ್ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಬಾಲಕಿಯ ವೈದ್ಯಕೀಯ ಪರೀಕ್ಷೆ ಹಾಗೂ ಹೇಳಿಕೆ ಬಳಿಕ ಕಾನೂನು ಕ್ರಮದ ಮುಂದಿನ ಹಂತ ಸ್ಪಷ್ಟವಾಗಲಿದೆ.
ಮಠದಲ್ಲಿ ವಾಸವಾಗಿದ್ದ ಅಣ್ಣಪ್ಪ ಪೂಜಾರಿ ಎಂಬಾತ ದತ್ತರಗಿ ಭಾಗಮ್ಮ ದೇವರ ಹೆಸರಿನಲ್ಲಿ ಸಣ್ಣ ಗುಡಿ ನಿರ್ಮಿಸಿಕೊಂಡು, ತಾನು ದೇವರ ಆರಾಧನೆ ಮಾಡುತ್ತೇನೆ, ತನ್ನ ಮೈಮೇಲೆ ಭಾಗ್ಯವಂತಿ ದೇವತೆ ಬರುತ್ತಾಳೆ ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇನೆ ಎಂದು ಭಕ್ತರನ್ನು ನಂಬಿಸುತ್ತಿದ್ದ ಎನ್ನಲಾಗಿದೆ.
ಇದಲ್ಲದೆ, ಮಟ್ಕಾ ಸಂಖ್ಯೆಗಳನ್ನೂ ಹೇಳುತ್ತೇನೆ ಎಂದು ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದ ಎಂಬ ಆರೋಪವೂ ಸ್ಥಳೀಯವಾಗಿ ಕೇಳಿಬಂದಿದೆ. ಧಾರ್ಮಿಕ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸಲಾಗುತ್ತಿತ್ತೆ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಸುರಪುರ ತಾಲೂಕಿನ ಹೆಗ್ಗಣದೊಡ್ಡಿ-ಗೋಡ್ರಿಹಾಳ ಗ್ರಾಮದ ೧೬ ವರ್ಷದ ಬಾಲಕಿಯನ್ನು ಕಳೆದ ಸುಮಾರು ಮೂರು ವರ್ಷಗಳಿಂದ ಮಠದ ಆವರಣದಲ್ಲಿ ಇರಿಸಿಕೊಂಡಿದ್ದಾನೆ ಎಂಬ ಮಾಹಿತಿ ಅಧಿಕಾರಿಗಳಿಗೆ ದೊರೆತಿದೆ.
ಮಠದ ಸಮೀಪ ಅರಣ್ಯ ಪ್ರದೇಶದಲ್ಲೇ ಸಣ್ಣ ಮನೆಯೊಂದನ್ನು ಮಾಡಿಕೊಂಡು ಆರೋಪಿ ವಾಸವಾಗಿದ್ದ ಎನ್ನಲಾಗಿದ್ದು, ರಾತ್ರಿ ವೇಳೆ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆ ಎಂಬ ಗಂಭೀರ ಆರೋಪ ದೂರಿನಲ್ಲಿ ಉಲ್ಲೇಖವಾಗಿದೆ. ಈ ಆರೋಪಗಳ ಸತ್ಯಾಸತ್ಯತೆ ಕುರಿತು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಬಾಲಕಿಯ ಸುರಕ್ಷತೆ ಕುರಿತು ಮಕ್ಕಳ ಸಹಾಯವಾಣಿ ೧೦೯೮ಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಳಿಕ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಪೊಲೀಸರು ಆಶನಾಳ ಗೇಟ್ ಬಳಿಯ ಅರಣ್ಯ ಪ್ರದೇಶದಲ್ಲಿರುವ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಬಾಲಕಿ ಮಠದಲ್ಲಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿಕೊಂಡಿದ್ದಾರೆ. ಬಳಿಕ ಬಾಲಕಿಗೆ ಅಗತ್ಯ ಧೈರ್ಯ ಹಾಗೂ ರಕ್ಷಣಾತ್ಮಕ ನೆರವು ನೀಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಥೋಡ್ ಅವರು ‘ಸಂಜೆವಾಣಿ’ಯೊAದಿಗೆ ಮಾತನಾಡಿ, ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆ ನಡೆಯಲಿದ್ದು, ಬಾಲಕಿಯ ಹೇಳಿಕೆ ದಾಖಲಾದ ನಂತರ ಪ್ರಕರಣದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಆರೋಪಗಳ ಸತ್ಯಾಸತ್ಯತೆ ದೃಢಪಟ್ಟ ಬಳಿಕ ಕಾನೂನುಬದ್ಧ ಕ್ರಮ ಜರುಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದೇವರ ಹೆಸರಿನಲ್ಲಿ ಸ್ವಂತ ಹೊಟ್ಟೆಪಾಡಿಗಾಗಿ ಜನರನ್ನು ನಂಬಿಸಿ, ಮಟ್ಕಾ-ಜೂಜಾಟದಂತಹ ಚಟುವಟಿಕೆಗಳಿಗೆ ಪ್ರೇರೇಪಿಸುವುದು ಹಾಗೂ ‘ಮೈಮೇಲೆ ದೇವರು ಬರುತ್ತದೆ’ ಎಂದು ಹೇಳಿಕೊಂಡು ಭಕ್ತರ ಮನಸ್ಸನ್ನು ಬೇರೆಡೆ ಸೆಳೆಯುವುದು ಸರಿಯಲ್ಲ ಎಂದು ಗೋವಿಂದ ರಾಥೋಡ್ ಅಭಿಪ್ರಾಯಪಟ್ಟಿದ್ದಾರೆ.
“ನಿಜವಾಗಿಯೂ ದೇವರ ಆರಾಧನೆ ಹಾಗೂ ಸಮಾಜ ಸೇವೆಯ ಉದ್ದೇಶವಿದ್ದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ-ಬೆಳೆ ಇಲ್ಲದೆ ಸಂಕಷ್ಟದಲ್ಲಿರುವ ರೈತರು ಹಾಗೂ ಕೂಲಿ ಕಾರ್ಮಿಕರ ನೆರವಿಗೆ ನಿಲ್ಲಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಉತ್ತಮ. ದೇವರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯಬಾರದು,” ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಥೋಡ್, ಕ್ಷೇತ್ರ ಕಾರ್ಯಕರ್ತರಾದ ಪರ್ವತ ರೆಡ್ಡಿ ಹಾಗೂ ರಾಜೇಶ್ವರಿ, ೧೧೨ ವಾಹನದ ಪೊಲೀಸ್ ಸಿಬ್ಬಂದಿ ಹನುಮಂತಪ್ಪ ಮತ್ತು ವೀರೇಶ್, ಗ್ರಾಮೀಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸೇರಿದಂತೆ ಸಂಬAಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.
ಬಾಲಕಿಯ ರಕ್ಷಣೆ, ವೈದ್ಯಕೀಯ ಪರೀಕ್ಷೆ, ಹೇಳಿಕೆ ಹಾಗೂ ಆರೋಪಗಳ ಸತ್ಯಾಸತ್ಯತೆ ಕುರಿತು ಕಾನೂನು ಪ್ರಕ್ರಿಯೆಯಂತೆ ತನಿಖೆ ಮುಂದುವರಿದಿದೆ. ಅಪ್ರಾಪ್ತೆಯ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಕಾನೂನುಬದ್ಧವಾಗಿ ಗೌಪ್ಯವಾಗಿಡಲಾಗಿದೆ.





























