Home ಮುಖಪುಟ ಸುದ್ದಿ ಮೇಕೆದಾಟು ಗದ್ದಲ

ಮೇಕೆದಾಟು ಗದ್ದಲ

ಚನ್ನೈ,ಆ.೭- ತಮಿಳುನಾಡು ವಿಧಾನಸಭೆಯಲ್ಲಿ ಕಾವೇರಿ ನೀರು ಹಂಚಿಕೆ ಹಾಗೂ ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಜಲಾಶಯ ಯೋಜನೆ ವಿಷಯವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಉಗ್ರ ಸ್ವರೂಪದ ವಾಗ್ವಾದ ನಡೆಯಿತು.


ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ನಡುವೆ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದ್ದು, “ತಮಿಳುನಾಡಿನ ಹಿತರಕ್ಷಣೆಗಾಗಿ ಯಾವುದೇ ಅವಮಾನ ಎದುರಿಸಲೂ ಸಿದ್ಧ” ಎಂದು ಮುಖ್ಯಮಂತ್ರಿ ವಿಜಯ್ ವಿಧಾನಸಭೆಯಲ್ಲಿ ಪ್ರತಿಪಾದಿಸಿದ್ದಾರೆ.


ಇಂದು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆಯೇ ಮೇಕೆದಾಟು ಯೋಜನೆಯನ್ನು ತಡೆಯಲು ತಮಿಳುನಾಡು ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಗಂಭೀರ ಆರೋಪ ಮಾಡಿದರು. “ಕರ್ನಾಟಕ ಸರ್ಕಾರವು ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗುತ್ತಿದ್ದರೆ, ಟಿವಿ ಕೆ ಸರ್ಕಾರ ಅದನ್ನು ತಡೆಯಲು ಏನು ಕ್ರಮ ಕೈಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.


ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವಿಜಯ್, “ಮೇಕೆದಾಟು ವಿರುದ್ಧ ಈಗಾಗಲೇ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ಯೋಜನೆಯನ್ನು ವಿರೋಧಿಸಲಾಗಿದೆ. ತಮಿಳುನಾಡು ರೈತರ ಹಿತಾಸಕ್ತಿಯನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದರು. ಅಷ್ಟೇ ಅಲ್ಲದೆ, ೧೯೬೯ರಲ್ಲಿ ಡಿಎಂಕೆ ಸರ್ಕಾರವೇ ಕರ್ನಾಟಕದ ಯೋಜನೆಗೆ ಮೊದಲ ಬಾರಿಗೆ ಅವಕಾಶ ಕೊಟ್ಟಿತ್ತು ಎಂದು ತಿರುಗೇಟು ನೀಡಿದರು.


ಬೆಂಗಳೂರು ಭೇಟಿ ಪ್ರಸ್ತಾಪಕ್ಕೆ ಆಕ್ಷೇಪ


ಕರ್ನಾಟಕದ ರಾಜಕೀಯ ಪಕ್ಷಗಳು ಮೇಕೆದಾಟು ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಸರ್ವಪಕ್ಷ ಸಭೆ ನಡೆಸಿವೆ. ಆದರೆ ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆ ಕರೆಯಲು ಹಿಂಜರಿಯುತ್ತಿರುವುದೇಕೆ ಎಂದು ಉದಯನಿಧಿ ಪ್ರಶ್ನಿಸಿದರು.


ಅಲ್ಲದೆ, ಮುಖ್ಯಮಂತ್ರಿ ವಿಜಯ್ ಅವರು ಸೌಹಾರ್ದಯುತ ಮಾತುಕತೆಗಾಗಿ ಬೆಂಗಳೂರಿಗೆ ಭೇಟಿ ನೀಡಲು ಯೋಜಿಸಿದ್ದ ಕುರಿತು ವ್ಯಂಗ್ಯವಾಡಿದ ಉದಯನಿಧಿ, “ಮೊದಲು ಬೆಂಗಳೂರು ಭೇಟಿಯ ಸುದ್ದಿ ಸೋರಿಕೆ ಮಾಡಲಾಯಿತು, ನಂತರ ವಿರೋಧ ವ್ಯಕ್ತವಾದಾಗ ಅದನ್ನು ನಿರಾಕರಿಸಲಾಯಿತು ಎಂದು ಟೀಕಿಸಿದರು.


ಉದಯನಿಧಿ ಟೀಕೆಗೆ ನೇರವಾಗಿ ಉತ್ತರಿಸಿದ ಸಿಎಂ ವಿಜಯ್, ನೆರೆ ರಾಜ್ಯದೊಂದಿಗೆ ಮಾತುಕತೆ ನಡೆಸುವುದು ತಪ್ಪೇ? ಶತೃತ್ವ ಹೊಂದಿರುವ ದೇಶಗಳೇ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಾಗ ನೆರೆ ರಾಜ್ಯದೊಂದಿಗೆ ಏಕೆ ಮಾತನಾಡಬಾರದು? ಇಂತಹ ಪ್ರಯತ್ನಗಳಿಂದ ನಮಗೆ ಅವಮಾನವಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಅವಮಾನವಾದರೂ ತಮಿಳುನಾಡಿನ ಜನರ ಕ್ಷೇಮಕ್ಕಾಗಿ ಅದನ್ನು ಎದುರಿಸಲು ನಾನು ಸಿದ್ಧ” ಎಂದು ಖಡಕ್ ಆಗಿ ಸಮರ್ಥಿಸಿಕೊಂಡರು.


ಸದ್ಯ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿಗಳಿಗೆ ಸದ್ಯದ ಉದ್ವಿಗ್ನ ವಾತಾವರಣದಲ್ಲಿ ಭೇಟಿಯನ್ನು ಮುಂದೂಡುವಂತೆ ಮನವಿ ಮಾಡಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ಬರಪೀಡಿತ ಕಾವೇರಿ ಜಲಾನಯನ ಪ್ರದೇಶಗಳ ಪ್ರವಾಸಕ್ಕೆ ಆಹ್ವಾನ ನೀಡುವುದಾಗಿ ತಿಳಿಸಿದ್ದಾರೆ.


ಕಾವೇರಿ ವಿವಾದದ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲು ತಾವು ಬಯಸುವುದಿಲ್ಲ.ಬದಲಿಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ತಮಿಳುನಾಡು ಸಿಎಂ ವಿಜಯ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.


ಆದರೆ ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿ ಕರ್ನಾಟಕದೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ಭೇಟಿ ನೀಡುವ ಆಲೋಚನೆ ಹೊಂದಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕರ್ನಾಟಕ ಸಿಎಂ ಜತೆಗಿನ ಮಾತುಕತೆ ವಿಚಾರವಾಗಿ ಅವರು ಮೊದಲ ಬಾರಿಗೆ ಮೌನಮುರಿದಂತಾಗಿದೆ.
ಇತ್ತೀಚಿಗಷ್ಟೆ ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದ ಪರವಾಗಿ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿತ್ತು.


ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ತನ್ನ ಭೂಭಾಗದಲ್ಲಿ ಜಲಾಶಯ ನಿರ್ಮಿಸುವ ಕಾನೂನುಬದ್ಧ ಹಕ್ಕಿದ್ದು,ಇದಕ್ಕಾಗಿ ತಮಿಳುನಾಡು, ಕೇರಳ ಅಥವಾ ಪುದುಚೇರಿಯ ಸಮ್ಮತಿ ಪಡೆಯುವ ಅಗತ್ಯವೇ ಇಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯಸಭೆಯಲ್ಲಿ ತಿಳಿಸಿತ್ತು.


ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ,೨೦೧೮ರ ಫೆಬ್ರವರಿ ೧೬ರಂದು ಕಾವೇರಿ ಜಲ ವಿವಾದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡವಾಗಿ ಯಾವುದೇ ನಿರ್ಮಾಣ ಕೈಗೊಳ್ಳಲು ಕರ್ನಾಟಕವು ಇತರ ತೀರ ರಾಜ್ಯಗಳಾದ ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ಒಪ್ಪಿಗೆ ಪಡೆಯಬೇಕು ಎಂಬ ಉಲ್ಲೇಖವೇ ಇಲ್ಲ ಎಂದು ತಿಳಿಸಿದ್ದರು.


ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿವರವಾದ ಯೋಜನಾ ವರದಿಯನ್ನು ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ತೀರ್ಪು ಹಾಗೂ ಪ್ರಸ್ತುತ ಕೇಂದ್ರ ಜಲ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಷ್ಕರಿಸಿ ಮರುಸಲ್ಲಿಸುವಂತೆ ಯೋಜನಾ ಪ್ರಾಧಿಕಾರಕ್ಕೆ ಹಿಂದಿರುಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದರು.

ಅಂದಾಜು ೯,೦೦೦ ಕೋಟಿ ವೆಚ್ಚದ ಯೋಜನೆ

ಕಾವೇರಿ ನ್ಯಾಯಾಧಿಕರಣವು ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರಿನ ಮಿತಿಯಲ್ಲೇ ಈ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ತಮಿಳುನಾಡಿಗೆ ಹರಿಯಬೇಕಾದ ನಿಗದಿತ ನೀರಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬ ಭರವಸೆ ನೀಡಲಾಗಿದೆ. ಅಣೆಕಟ್ಟು ನಿರ್ಮಾಣದಿಂದ ಕೆಳಭಾಗದ ತಮಿಳುನಾಡಿನ ಕೃಷಿ ಪ್ರದೇಶಗಳಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಜಲ ಆಯೋಗದ ಮೆಟ್ಟಿಲೇರಿ ವಿರೋಧ ವ್ಯಕ್ತಪಡಿಸುತ್ತಿದೆ.

ಕರ್ನಾಟಕದ ರಾಮನಗರ ಜಿಲ್ಲೆಯ (ಬೆಂಗಳೂರು ದಕ್ಷಿಣ) ಕನಕಪುರ ತಾಲೂಕಿನ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲಿತ ಜಲಾಶಯ ನಿರ್ಮಾಣ ಯೋಜನೆಯಾಗಿದೆ.ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ೪.೭೫ ಟಿಎಂಸಿ ನೀರು ಪೂರೈಕೆ ಮಾಡುವುದು ಮತ್ತು ೪೦೦ ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಯಾಗಿದೆ.