
ಉಡುಪಿ,ಆ.೮- ಕಾಪು ತಾಲೂಕಿನ ಮುದುರಂಗಡಿ ಪೇಟೆಯಲ್ಲಿ ನಿನ್ನೆ ಹಾಡಹಗಲೇ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಅವರನ್ನು ಕೊಲೆಗೈದ ಆರೋಪಿಗೆ ಜಿಲ್ಲಾ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ಕೊಲೆಗಾರ ಉತ್ತರ ಪ್ರದೇಶ ಮೂಲದ ಶೂಟರ್ ರಾಜು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾಂಗ್ರೆಸ್ ಮುಖಂಡ, ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರನ್ನು ಪಿಲಾರು ಗ್ರಾಮದ ಮುದರಂಗಡಿಯ ಸೈಂಟ್ ಫ್ರಾನ್ಸಿಸ್ ಜೆವಿಯರ್ ಚರ್ಚ್ ಎದುರು ನಿನ್ನೆ ಮಧ್ಯಾಹ್ನ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಡೇವಿಡ್ ಡಿಸೋಜ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಡೇವಿಡ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು, ಡೇವಿಡ್ ಅವರು ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ತಂಡ ಹಾಗೂ ಶ್ವಾನದಳವು ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸಿದ್ದರು.
ಕೊಲೆ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಕೆಲವೇ ಗಂಟೆಗಳಲ್ಲಿ ಆರೋಪಿ ರಾಜು ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಳಿಕ ಆತನನ್ನು ಕಾಪು ಪಿಎಸ್ಐ ತೇಜಸ್ವಿ, ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ತಂಡವು ಕರೆತರುತ್ತಿರುವಾಗ ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಬೈಂದೂರು ಸಮೀಪ ಒತ್ತಿನೆಣೆ ಬಳಿ ಪೊಲೀಸರಿಗೆ ಹಲ್ಲೆ ನಡೆಸಿ ಅರೋಪಿ ಪರಾರಿಯಾಗಲು ಯತ್ನಿಸಿದ್ದಾನೆ.
ಆಗ ಕಾಪು ಠಾಣೆ ಪಿಎಸ್ಐ ತೇಜಸ್ವಿ ಅವರು ಸರ್ವೀಸ್ ಪಿಸ್ತೂಲಿನಿಂದ ರಾಜು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಘಟನೆ ವೇಳೆ ಎಸ್ಐ ತೇಜಸ್ವಿ ಅವರಿಗೆ ಗಾಯವಾಗಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

































