Home ಮುಖಪುಟ ಸುದ್ದಿ ಶಾಸಕ ಕೃಷ್ಣಪ್ಪ – ಬಿಕೆಎಚ್ ಭೇಟಿ

ಶಾಸಕ ಕೃಷ್ಣಪ್ಪ – ಬಿಕೆಎಚ್ ಭೇಟಿ

ಬೆಂಗಳೂರು, ಆ. ೭- ಸಚಿವ ಸಿಗದೇ ಇದ್ದಿದ್ದಕ್ಕೆ ಬೇಸರಗೊಂಡಿರುವ ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ರವರನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇಂದು ಭೇಟಿ ಮಾಡಿ ಸಮಾಧಾನಗೊಳಿಸುವ ಪ್ರಯತ್ನ ಮಾಡಿದರು.


ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಚಿವ ಸಿಗದೇ ಇದ್ದಿದ್ದಕ್ಕೆ ಕಾಂಗ್ರೆಸ್‌ನ ಹಿರಿಯ ಶಾಸಕರಾಗಿರುವ ಎಂ. ಕೃಷ್ಣಪ್ಪ ಅಸಮಾಧಾನ ಹೊರ ಹಾಕಿದ್ದರು.
ಅವರ ಬೆಂಬಲಿಗರು ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು.


ಈ ಬೆಳವಣಿಗೆ ಬೆನ್ನಲ್ಲೆ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರವರು ವಿಜಯನಗರದ ಎಂ. ಕೃಷ್ಣಪ್ಪರವರ ನಿವಾಸಕ್ಕೆ ತೆರಳಿ ಅವರೊಂದಿಗೆ ಚರ್ಚಿಸಿ ಅವರ ಅಸಮಾಧಾನವನ್ನು ಸರಿಪಡಿಸುವ ಪ್ರಯತ್ನ ನಡೆಸಿದ್ದರು.
ಇದರ ಬೆನ್ನಲ್ಲೇ ಇಂದು ಬೆಳಿಗ್ಗೆಯೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ವಿಜಯನಗರದ ಕೃಷ್ಣಪ್ಪನವರ ನಿವಾಸಕ್ಕೆ ತೆರಳಿ ಅವರ ಜತೆ ಸುಮಾರು ಹೊತ್ತು ಚರ್ಚೆ ನಡೆಸಿದರು.


ರಾಹುಲ್‌ಗಾಂಧಿ ಮಾತನಾಡಿ ತೀರ್ಮಾನ


ಎಂ. ಕೃಷ್ಣಪ್ಪನವರ ಜತೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ಎಂ. ಕೃಷ್ಣಪ್ಪನವರು ಹಿರಿಯರು. ಹಿರಿಯರಿಗೆ ಅನ್ಯಾಯವಾದಾಗ ಬೇಸರವಾಗುವುದು ನಿಜ. ಕೃಷ್ಣಪ್ಪನವರಿಗೆ ಬೇಸರವಾದರೂ ಪಕ್ಷಕ್ಕೆ ತೊಂದರೆಯಾಗುವ ರೀತಿ ಎಂದೂ ನಡೆದುಕೊಂಡಿಲ್ಲ. ಅದು ಬಹಳ ಸಂತೋಷ ಎಂದರು.


ಶಾಸಕ ಎಂ. ಕೃಷ್ಣಪ್ಪರವರ ಜತೆ ರಾಹುಲ್‌ಗಾಂಧಿಯವರೇ ಮಾತನಾಡುತ್ತಾರೆ. ಅವರಿಗೆ ಏನು ಸ್ಥಾನ ಕೊಡಬೇಕು ಎಂಬುದನ್ನು ರಾಹುಲ್‌ಗಾಂಧಿಯವರೇ ನಿರ್ಧರಿಸುತ್ತಾರೆ. ರಾಹುಲ್‌ಗಾಂಧಿಯವರು ಮಾತನಾಡಿದಾಗ ಎಲ್ಲವೂ ಗೊತ್ತಾಗುತ್ತದೆ ಎಂದರು.


ನಾನು ಕೃಷ್ಣಪ್ಪ ಅವರು ಒಂದೇ ಕಾಲೇಜಿನಲ್ಲಿ ಕಲಿತವರು. ಅವರು ನನ್ನ ಸೀನಿಯರ್. ನಮ್ಮದು ಸುಮಾರು ೪೫-೫೦ ವರ್ಷದ ಸಂಬಂಧ. ಅವರಿಗೆ ಆಗಿರುವ ನೋವಿನ ಬಗ್ಗೆ ರಾಹುಲ್‌ಗಾಂಧಿಯವರಿಗೂ ಮಾಹಿತಿ ಹೋಗಿದೆ. ರಾಹುಲ್‌ಗಾಂಧಿಯವರೇ ಕೃಷ್ಣಪ್ಪರವರ ಜತೆ ಮಾತನಾಡಿ ಅವರಿಗೆ ಯಾವ ಸ್ಥಾನ ಕೊಡಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದರು.


ರಾಜಕಾರಣ ಸಾಧ್ಯತೆಗಳ ಆಟ. ಹಾಗಾಗಿ ಪಾಲಿಟಿಕ್ಸ್‌ನಲ್ಲಿ ಏನಾಗುತ್ತೆ ಎಂಬುದನ್ನು ಯಾರೂ ಹೇಳಲಿಕ್ಕೆ ಆಗುವುದಿಲ್ಲ. ನಾವು ಯಾವಾಗಲೂ ಸಕಾರಾತ್ಮಕವಾಗಿ ಇದ್ದರೆ ಒಳ್ಳೆಯದು ಆಗುತ್ತದೆ ಎಂದು ಅವರು ಹೇಳಿದರು.


ಎಂ. ಕೃಷ್ಣಪ್ಪ ಹೇಳಿಕೆ


ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ. ಕೃಷ್ಣಪ್ಪ ಅವರು, ಎರಡು ದಿನಗಳ ಹಿಂದೆ ವರಿಷ್ಠ ನಾಯಕರು ನಮ್ಮ ಮನೆಗೆ ಬಂದಿದ್ದರು. ಇಂದು ನಮ್ಮ ಪಕ್ಷದ ಅಧ್ಯಕ್ಷರು ನಮ್ಮ ಮನೆಗೆ ಬಂದಿದ್ದಾರೆ. ನಾವು ನಮ್ಮ ನಿಲುವನ್ನು ತಿಳಿಸಿದ್ದೇವೆ. ಅದು ಬಿಟ್ಟು ಬೇರೆ ಏನೂ ಹೇಳಿಕೆ ನೀಡುವುದಿಲ್ಲ. ಎಲ್ಲವೂ ಎಲ್ಲರಿಗೂ ಗೊತ್ತಿರುವುದೇ ಎಂದು ಹೇಳಿದರು.


ಭರವಸೆಯನ್ನು ಅವರು ಕೊಡುವುದಲ್ಲ, ನಾವು ನಮ್ಮ ನಿಲುವನ್ನು ಹೇಳಿದ್ದೇವೆ. ನತಿಂಗ್ ಲೆಸ್‌ದೆನ್ ದಟ್ ಅಷ್ಟೇ ಎಂದರು.