
ಸಂಜೆವಾ ವಾರ್ತೆ,
ವಿಜಯಪುರ, ಅ.೨೪: ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮಳ ಧೈರ್ಯ, ಶೌರ್ಯ, ದೇಶಪ್ರೇಮ ಹಾಗೂ ಆಡಳಿತ ವೈಖರಿಯನ್ನು ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರು ತಮ್ಮ ನಾಡಿನ ನೆಲ, ಜಲ ಹಾಗೂ ಸ್ವಾಭಿಮಾನಕ್ಕಾಗಿ ದೃಢತೆಯಿಂದ ಹೋರಾಡಿದ ವೀರ ಮಹಿಳೆ. ತಮ್ಮ ಕಾಲದಲ್ಲಿಯೇ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನಾಯಕತ್ವದ ಗುಣವನ್ನು ಮೆರೆದಿದ್ದರು. ಅವರ ಧೈರ್ಯ, ಶೌರ್ಯ, ದೇಶಪ್ರೇಮ ಮತ್ತು ಆಡಳಿತ ಕೌಶಲ್ಯಗಳು ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಚೆನ್ನಮ್ಮಳ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ದೇಶಪ್ರೇಮ, ಸ್ವಾಭಿಮಾನ ಮತ್ತು ರಾಷ್ಟ್ರನಿಷ್ಠೆಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಅವರು ಕರೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್ ಮಡಿವಾಳಪ್ಪ ಕರಡಿ ಕಾರ್ಯಕ್ರಮ ಉದ್ಘಾಟಿಸಿದರು. ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಹಾಗೂ ಸಮಾಜದ ಮುಖಂಡ ಬಿ.ಎಂ. ಪಾಟೀಲ ಮಾತನಾಡಿದರು.
ಉಪನ್ಯಾಸ ನೀಡಿದ ಶರಣಗೌಡ ಪಾಟೀಲ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಕೊಡುಗೆ ಸ್ಮರಣೀಯವಾಗಿದೆ. ತಮ್ಮ ಕಾಲದಲ್ಲಿಯೇ ಯುದ್ಧತಂತ್ರಗಳನ್ನು ಕರಗತ ಮಾಡಿಕೊಂಡು ಶತ್ರುಗಳ ವಿರುದ್ಧ ಧೈರ್ಯದಿಂದ ಹೋರಾಡಿದ ಅವರು ಅಪ್ರತಿಮ ವೀರ ಮಹಿಳೆಯಾಗಿದ್ದಾರೆ ಎಂದರು.
ಚೆನ್ನಮ್ಮಳ ತ್ಯಾಗ, ಸಾಹಸ ಮತ್ತು ಅಪ್ಪಟ ದೇಶಪ್ರೇಮದ ಕಿಚ್ಚನ್ನು ಮಕ್ಕಳಲ್ಲಿ ಬೆಳೆಸಬೇಕು. ಅವರ ಜೀವನಾನುಭವ ಹಾಗೂ ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಭಾರತಿ ಕಣಮೂಚನಾಳ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಆಯುಷ್ ಅಧಿಕಾರಿ ಡಾ. ವಿದ್ಯಾವತಿ ಅಥಣಿ, ಗಿರೀಶ ಕುಲಕರ್ಣಿ, ವಿ.ಸಿ. ನಾಗಠಾಣ, ಬಿ.ಎಂ. ಬಿರಾದಾರ, ದಾನೇಶ ಅವಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅದ್ದೂರಿ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿದ ಮೆರವಣಿಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರ ತಲುಪಿತು.
ಮೆರವಣಿಗೆಯಲ್ಲಿ ಸಾರ್ವಜನಿಕರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.





















