Home Uncategorized ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸೆ.೭ರಂದು ಬೃಹತ್ ರ‍್ಯಾಲಿ: ವಿನೋದ ರತ್ನಾಕರ

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸೆ.೭ರಂದು ಬೃಹತ್ ರ‍್ಯಾಲಿ: ವಿನೋದ ರತ್ನಾಕರ

ಬೀದರ್: ಜಿಲ್ಲೆಯ ವಿವಿಧೆಡೆ ದಲಿತರ ಮನೆ-ಜಮೀನು ತೆರವು, ದೌರ್ಜನ್ಯ, ಹಲ್ಲೆ ಹಾಗೂ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಕ್ರಮದ ವಿರೂದ್ಧ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸುವುದಾಗಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿನೋದ ರತ್ನಾಕರ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಅಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಶಹಾಂಗAಜನಲ್ಲಿರುವ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತ, ಶಿವಾಜಿ ಚೌಕ್, ಹರಳಯ್ಯ ಸರ್ಕಲ್ ಮಾರ್ಗವಾಗಿ ಪುನಃ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಜಿಲ್ಲಾಡಳಿತಕ್ಕೆ ಈ ಕುರಿತಾಗಿ ಮನವಿ ಸಲ್ಲಿಸಲಾಗುವುದೆಂದು ಹೇಳಿದರು.
೨೦೧೨, ೧೩ನೇ ಇಸ್ವಿಯಲ್ಲಿ ಭಾಲ್ಕಿ ತಾಲೂಕಿನಲ್ಲಿ ಹಲವಾರು ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳು ಜರುಗಿದ್ದು, ಬಹುತೇಕ ಪ್ರಕರಣಗಳು ದಲಿತರ ಮೇಲೆ ನಡೆದಿರುವುದು ವಿಪರ್ಯಾಸ. ಅವುಗಳನ್ನು ಮುಚ್ಚಿ ಹಾಕಲು ಅಲ್ಲಿಯ ಶಾಸಕರು, ಇತರೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಪ್ರಯತ್ನಿಸಿರುವುದು ಗುಟ್ಟಾಗಿ ಉಳಿದಿಲ್ಲವೆಂದು ಆರೋಪಿಸಿದರು.
‘ದಲಿತರ ಮನೆ-ಜಮೀನು ತೆರವು ಹಾಗೂ ದೌರ್ಜನ್ಯ ತಕ್ಷಣ ನಿಲ್ಲಿಸಬೇಕು. ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಜಿಲ್ಲೆಯ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ಬೀದರ್‌ನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ದಲಿತ ಗೌರವಾಧ್ಯಕ್ಷ ರಾಜಕುಮಾರ ಮೂಲಭಾರತಿ ಮಾತನಾಡಿ, ಭಾಲ್ಕಿ ತಾಲೂಕಿನ ಮಳಚಾಪುರ ಸೇರಿದಂತೆ ವಿವಿಧೆಡೆ ದಲಿತರು ಹಲವು ವರ್ಷಗಳಿಂದ ವಾಸಿಸುತ್ತಿರುವ ಜಾಗದಲ್ಲಿನ ಮನೆಗಳನ್ನು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ ಎಂದು ಆರೋಪಿಸಿದರು.
‘ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಬಡ ಕುಟುಂಬಗಳ ಮನೆಗಳನ್ನು ಉಳಿಸಿಕೊಂಡು ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಶಾಲೆ ನಿರ್ಮಿಸಬಹುದು ಎಂದು ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ದೂರಿದರು.
ಸರ್ಕಾರಿ ಜಮೀನಿನ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಬಡವರ ಮನೆಗಳ ತೆರವಿಗೆ ಮುಂದಾಗುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಒಕ್ಕೂಟದ ಪ್ರಮುಖರಾದ ರಾಹುಲ ಖಂದಾರೆ ಮಾತನಾಡಿ, ಭಾಲ್ಕಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಸೂಕ್ತ ತನಿಖೆ ನಡೆಯುತ್ತಿಲ್ಲ. ಜೀರಗ್ಯಾಳದಲ್ಲಿ ರಾಜಕುಮಾರ್ ಶಿಂಧೆ ಅವರ ಹತ್ಯೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ದಲಿತ ಪ್ಯಾಂತರ್ ರಾಜ್ಯಾಧ್ಯಕ್ಷ ರಾಹುಲ ದಲಾಲೆ ಮಾತನಾಡಿ, ‘ಸಂವಿಧಾನಬದ್ಧವಾಗಿ ಹಕ್ಕುಗಳಿಗಾಗಿ ಹೋರಾಡುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ರೌಡಿಶೀಟ್ ತೆರೆಯುವ ಬೆದರಿಕೆ ಹಾಕುತ್ತಿದ್ದಾರೆ. ಇದು ಹೋರಾಟಗಾರರ ಧ್ವನಿ ಅಡಗಿಸುವ ಪ್ರಯತ್ನ’ ಎಂದು ಅವರು ಆರೋಪಿಸಿದರು.
ಒಕ್ಕೂಟದ ಇನ್ನೋರ್ವ ಮುಖಂಡ ದಿಲಿಪ ವರ್ಮಾ ಮಾತನಾಡಿ, ದಲಿತರ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರ ಸೂಕ್ತ ಗಮನ ಹರಿಸುತ್ತಿಲ್ಲ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಪೊಲೀಸ್ ದೂರು ಪ್ರಾಧಿಕಾರ, ಡಿಜಿ-ಐಜಿಪಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಎಸ್‌ಸಿ-ಎಸ್‌ಟಿ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ರಾಜಕುಮಾರ್ ಶಿಂಧೆ, ಗೌತಮ್ ಕಾಂಬಳೆ, ಗೌತಮ್ ಬಗದಲಕರ್, ಹರ್ಷಿತ ದಾಂಡೇಕರ್, ಪ್ರಕಾಶ ರಾವಣ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.