Home ಜಿಲ್ಲೆ ತಾರನಾಳ ಕೆರೆ ತುಂಬಿಸದಿದ್ದರೆ ೧೧ರಿಂದ ಬೃಹತ್ ಹೋರಾಟ:ನಡಹಳ್ಳಿ

ತಾರನಾಳ ಕೆರೆ ತುಂಬಿಸದಿದ್ದರೆ ೧೧ರಿಂದ ಬೃಹತ್ ಹೋರಾಟ:ನಡಹಳ್ಳಿ

ಮುದ್ದೇಬಿಹಾಳ : ತಾರನಾಳ ಕೆರೆಯನ್ನು ಶೇ.೧೦೦ರಷ್ಟು ತುಂಬಿಸುವುದು ಸೇರಿದಂತೆ ಸುತ್ತಮುತ್ತಲಿನ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲವಾದಲ್ಲಿ ಅ.೧೧ರಿಂದ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಮಾಜಿ ಶಾಸಕ ಬಿಜೆಪಿ ರೈತ ಮೂರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.
ಬುಧವಾರರಂದು ದಾಸೋಹ ನಿಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾರನಾಳ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಕೆರೆಗೆ ಸಮರ್ಪಕ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ. ಬಿದರಕುಂದಿ ಭಾಗದಿಂದ ನೀರು ತಾರನಾಳ ಕೆರೆಗೆ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾರನಾಳ ಕೆರೆ ಮಾತ್ರವಲ್ಲದೆ ಢವಳಗಿ, ನಾಗಬೇನಾಳ ಸೇರಿದಂತೆ ಈ ಭಾಗದ ಎಲ್ಲ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕು. ಕೆರೆಗಳು ತುಂಬಿದ ಬಳಿಕ ಹೆಚ್ಚುವರಿ ನೀರನ್ನು ಹಳ್ಳಗಳಿಗೆ ಹರಿಸಿದರೆ ಅಂತರ್ಜಲ ಮಟ್ಟ ಸುಧಾರಿಸಲಿದೆ. ಹಳ್ಳಗಳ ದಂಡೆಯಲ್ಲಿರುವ ಬಾವಿಗಳು ಹಾಗೂ ಗ್ರಾಮಗಳ ಕುಡಿಯುವ ನೀರಿನ ಬೋರ್‌ವೆಲ್‌ಗಳಿಗೂ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುದ್ದೇಬಿಹಾಳ, ತಾಳಿಕೋಟೆ ಭಾಗದ ನೀರಿನ ಸಮಸ್ಯೆಯನ್ನು ಶಾಸಕರು ಗಟ್ಟಿಯಾಗಿ ಪ್ರಸ್ತಾಪಿಸಬೇಕು. ತಾರನಾಳ ಕೆರೆ ಟೇಲ್‌ಎಂಡ್ ಪ್ರದೇಶದಲ್ಲಿರುವುದರಿಂದ ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಈ ಬಾರಿ ಕೆರೆ ತುಂಬಿಸುವಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಒತ್ತಾಯಿಸಿದರು.
ಎರಡು ಟಿಎಂಸಿ ನೀರು ಬಿಡಬೇಕು:
ಈ ಭಾಗದ ಕೆರೆಗಳನ್ನು ತುಂಬಿಸಲು ಕನಿಷ್ಠ ಎರಡು ಟಿಎಂಸಿ ನೀರು ಹರಿಸಬೇಕು. ಪ್ರಸ್ತುತ ಅರ್ಧ ಟಿಎಂಸಿ ನೀರು ಬಿಡುವ ಮೂಲಕ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಿಲ್ಲ. ಹನುಮನಹಾಳ ಜಾಕ್‌ವೆಲ್ ಸೇರಿದಂತೆ ವಿವಿಧ ಪಂಪ್‌ಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಚಾಲನೆಗೊಳಿಸಿ ನೀರನ್ನು ಲಿಫ್ಟ್ ಮಾಡಿ ಶಂಕರನಾಳ ಕಾಲುವೆಗೆ ಹರಿಸಬೇಕು ಎಂದು ಆಗ್ರಹಿಸಿದರು.
ಬಿಸನಾಳ ಭಾಗದಲ್ಲಿ ಜಾಕ್‌ವೆಲ್‌ಗಳ ಕಾರ್ಯನಿರ್ವಹಣೆ, ವಿವಿಧ ಪಂಪ್‌ಗಳ ಚಾಲನೆ ಹಾಗೂ ಯಾವ ಭಾಗಕ್ಕೆ ಎಷ್ಟು ನೀರು ಹೋಗುತ್ತಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ನೀರು ಬಿಡುವ ವೇಳಾಪಟ್ಟಿಯಲ್ಲಿ ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಭಾಗಕ್ಕೆ ಕೊನೆಯ ಆದ್ಯತೆ ನೀಡುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.
ಕೆರೆಗಳಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಲು ರೈತರು ಬಳಸುತ್ತಿರುವ ಪಂಪ್‌ಗಳ ವಿದ್ಯುತ್ ಸಂಪರ್ಕವನ್ನು ಆರ್‌ಆರ್ ಸಂಖ್ಯೆ ಹೊಂದಿರುವ ರೈತರ ವಿದ್ಯುತ್ ಸಂಪರ್ಕ ಕಡಿತ ಮಾಡಿರುವ ಘಟನೆಗಳು ನಡೆದಿವೆ. ನೀರಿನ ಕೊರತೆಯಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೀರು ಎತ್ತಿಕೊಳ್ಳಲು ಬಳಸುವ ಪಂಪ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದು ಸರಿಯಲ್ಲ. ಅಧಿಕಾರಿಗಳು ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಸಲುವಾಗಿ ರೈತರು ಅಳವಡಿಸಿಕೊಂಡಿರುವ ಮೋಟರ್‌ಗಳ ವಿಚಾರದಲ್ಲಿ ಅಧಿಕಾರಿಗಳು ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು. ದ್ರಾಕ್ಷಿ, ಬಾಳೆ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಸಿಕೊಂಡಿದ್ದು, ನೀರಿನ ಅಗತ್ಯ ತೀವ್ರವಾಗಿದೆ. ರೈತರ ಹಿತದೃಷ್ಟಿಯಿಂದ ವಿದ್ಯುತ್ ಮತ್ತು ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಶಾಸಕರ ವಿರುದ್ಧ ಆರೋಪ:
ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರು ಕೆರೆಗಳಿಗೆ ನೀರು ಹರಿಸುವ ಕುರಿತು ಪತ್ರ ಬರೆದಿರುವುದಾಗಿ ಹೇಳಿಕೊಂಡು ಪ್ರಚಾರ ಪಡೆಯುವುದಕ್ಕಿಂತ, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಭಾಗದ ನೀರಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಬೇಕು ತಾರನಾಳ, ಢವಳಗಿ ಸೇರಿದಂತೆ ಹಲವು ಕೆರೆಗಳನ್ನು ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ತುಂಬಿಸಲು ಪ್ರಯತ್ನ ನಡೆದಿಲ್ಲ ಎಂದು ಆರೋಪಿಸಿದ ಮಾಜಿ ಶಾಸಕ ನಡಹಳ್ಳಿ ಅವರು, ನೀರು ಬಿಡಿಸುವಲ್ಲಿ ಶಾಸಕರು ತಮ್ಮ ಪ್ರಭಾವವನ್ನು ಬಳಸಬೇಕು. ನೀರು ಹರಿಸುವ ಕಾರ್ಯದ ಕುರಿತು ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದರು.
ಅ.೧೧ ರೊಳಗೆ ತಾರನಾಳ ಕೆರೆಗೆ ಸಮರ್ಪಕವಾಗಿ ನೀರು ಹರಿಸಿ ಕೆರೆ ತುಂಬಿಸುವ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು. ಅಗತ್ಯವಿದ್ದರೆ ಕೆಬಿಜೆಎನ್‌ಎಲ್ ಕಚೇರಿ ಮುತ್ತಿಗೆ ಸೇರಿದಂತೆ ಹೋರಾಟದ ವಿವಿಧ ಹಂತಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾರನಾಳ ಕೆರೆ ತುಂಬಿಸುವುದು ಕೇವಲ ಒಂದು ಗ್ರಾಮದ ಸಮಸ್ಯೆಯಲ್ಲ. ಗುಡ್ನಾಳ, ತಾರನಾಳ, ಬಳವಾಟ, ಢವಳಗಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬAಧಿಸಿದ ಪ್ರಮುಖ ವಿಷಯವಾಗಿದೆ. ಆದ್ದರಿಂದ ಸರ್ಕಾರ ಮತ್ತು ನೀರಾವರಿ ಇಲಾಖೆ ತಕ್ಷಣ ಕ್ರಮ ಕೈಗೊಂಡು ಕೆರೆಗಳನ್ನು ತುಂಬಿಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಶಂಕರಗೌಡ ಶಿವಣಗಿ, ಪ್ರಭು ಕಡಿ, ಗಂಗಾಧರರಾವ್ ನಾಡಗೌಡ, ಗುರುನಾಥಗೌಡ ಬಿರಾದಾರ, ಅಶೋಕ ವನಹಳ್ಳಿ, ಕೆಂಚಪ್ಪ ಬಿರಾದಾರ ಲಕ್ಷö್ಮಣ ಬಿಜ್ಜೂರ, ವಿಜಯಕುಮಾರ ಬಡಿಗೇರ, ರಾಜಶೇಖರ ಹೊಳಿ, ಪರಶುರಾಮ ನಾಲತವಾಡ, ಲಕ್ಷಿö್ಮÃ ವಾಲೀಕಾರ, ಗೌರಮ್ಮ ಹುನಗುಂದ, ನಾಗೇಶ ಕವಡಿಮಟ್ಟಿ, ಸಂಗಣ್ಣ ಹತ್ತಿ, ರಾಜು ಬಳ್ಳೊಳ್ಳಿ, ಹಣಮಂತ ನಾಯಕಮಕ್ಕಳ, ಸಿದ್ದರಾಜ ಹೊಳಿ, ಪ್ರಸನ್ನ ಮಠ, ರಾಮನಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ರುದ್ರಗೌಡ ಪಾಟೀಲ, ಸಂಗಮನಾಥ ಬಿರಾದಾರ ಮೊದಲಾದವರು ಉಪಸ್ತಿತರಿದ್ದರು.