
ಯಾದಗಿರಿ:ಜೂ.೧೫: ದೇಶದ ಇತಿಹಾಸದಲ್ಲಿ ಶೌರ್ಯ, ಧೈರ್ಯ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಗುರುತಿಸಿಕೊಂಡಿರುವ ಮಹಾರಾಣಾ ಪ್ರತಾಪ್ ಸಿಂಹ ಅವರು ಅಪ್ಪಟ ದೇಶಭಕ್ತ ಹಾಗೂ ಅಪ್ರತಿಮ ಧೈರ್ಯಶಾಲಿ ರಾಜರಾಗಿದ್ದರು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಸಹ್ಯಾದ್ರಿ ಶಾಲೆಯಲ್ಲಿ ಜಿಲ್ಲಾ ರಜಪೂತ ಸಮಾಜ ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ಅವರ ೪೮೬ನೇ ಜಯಂತೋತ್ಸವ ಹಾಗೂ ೨೦೨೫-೨೬ನೇ ಸಾಲಿನ ಎಸ್ ಎಸ್ ಎಲ್‌ಸಿ, ಪಿಯುಸಿ ಮತ್ತು ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾರಾಣಾ ಪ್ರತಾಪ್ ಸಿಂಹ ಅವರು ತಮ್ಮ ಜೀವನದುದ್ದಕ್ಕೂ ದೇಶದ ಗೌರವ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡಿದ ಮಹಾನ್ ಯೋಧರಾಗಿದ್ದರು. ಸಮರ ಕಲೆ, ಕುದುರೆ ಸವಾರಿ ಹಾಗೂ ಬಿಲ್ಲುಗಾರಿಕೆಯಲ್ಲಿ ಪರಿಣತಿ ಹೊಂದಿದ್ದ ಅವರು, ೧೫೭೨ರಲ್ಲಿ ತಂದೆಯ ನಿಧನದ ಬಳಿಕ ಮೇವಾರ್ ರಾಜವಂಶದ ೧೩ನೇ ರಾಜರಾಗಿ ಅಧಿಕಾರ ಸ್ವೀಕರಿಸಿ, ತಮ್ಮ ಎದುರಿನ ಸವಾಲುಗಳನ್ನು ಅಪ್ರತಿಮ ಧೈರ್ಯದಿಂದ ಎದುರಿಸಿದ್ದರು ಎಂದು ಶಾಸಕರು ಸ್ಮರಿಸಿದರು.
“ರಜಪೂತ ಸಮಾಜ ಶೌರ್ಯ, ಸಾಹಸ ಮತ್ತು ತ್ಯಾಗದ ಪರಂಪರೆಯನ್ನು ಹೊಂದಿರುವ ಸಮಾಜವಾಗಿದೆ. ಕಠಿಣ ಪರಿಶ್ರಮದ ಮೂಲಕ ತಮ್ಮ ಬದುಕು ಕಟ್ಟಿಕೊಂಡು, ಸಮಾಜಕ್ಕೆ ಮಾದರಿಯಾಗಿರುವ ಈ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸಬೇಕು. ವಿದ್ಯೆಯೇ ಜೀವನದ ದೊಡ್ಡ ಸಂಪತ್ತು. ಸಾಧನೆಯ ಮೂಲಕ ಮಕ್ಕಳು ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಹಾಗೂ ಪಾಲಕರ ಹೆಮ್ಮೆಯನ್ನು ಹೆಚ್ಚಿಸಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.
ರಜಪೂತ ಸಮಾಜದ ಭವನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸೂಕ್ತ ಸ್ಪಂದನೆ ನೀಡುವ ಭರವಸೆಯನ್ನು ಅವರು ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಗಂಗಾವತಿ ರಜಪೂತ ಸಮಾಜದ ಮಹಿಳಾ ಮುಖಂಡೆ ಅನ್ನಪೂರ್ಣಸಿಂಗ್, ರಜಪೂತ ಸಮಾಜವು ನಂಬಿಕೆ, ವಿಶ್ವಾಸ, ಧೈರ್ಯ ಹಾಗೂ ತ್ಯಾಗಕ್ಕೆ ಹೆಸರುವಾಸಿಯಾದ ಸಮಾಜವಾಗಿದೆ ಎಂದರು.ಅಖAಡ ಭಾರತದ ರಕ್ಷಣೆಗಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಸಮಾಜಗಳಲ್ಲಿ ರಜಪೂತ ಸಮಾಜ ಪ್ರಮುಖವಾಗಿದೆ. ಯಾದಗಿರಿಯಲ್ಲಿ ಸಮಾಜದ ಭವನ ನಿರ್ಮಾಣಕ್ಕೆ ನಿವೇಶನದ ಅಗತ್ಯವಿದ್ದು, ಶಾಸಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿರುವುದು ಸಂತಸದ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಾಜದಿಂದ ಸಾವಿರಾರು ಪ್ರತಿಭೆಗಳು ಹೊರಹೊಮ್ಮುವ ವಿಶ್ವಾಸವಿದೆ ಎಂದು ಹೇಳಿದರು.
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ವೆಂಕಟಸಿAಗ್ ರಾಯಚೂರು ಮಾತನಾಡಿ, ಎಲ್ಲ ಸಮುದಾಯಗಳೊಂದಿಗೆ ಪ್ರೀತಿ, ವಿಶ್ವಾಸದಿಂದ ಬೆರೆಯುವ ಗುಣ ರಜಪೂತ ಸಮಾಜದ ವಿಶೇಷತೆ ಎಂದು ಹೇಳಿದರು. ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಕಲಬುರಗಿ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್ ತಿವಾರಿ, ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ ಪ್ರಸಾದ್ ತಿವಾರಿ ಸೇರಿದಂತೆ ವಿಕ್ರಮ್ ಸಿಂಗ್ ಗೌತಮ್, ಸಂದೀಪ್ ಹಜಾರೆ, ಅಶೀಷ ಹಜಾರೆ, ರಾಹುಲ್ ಹಜಾರೆ, ಸೋಹನ್ ಪ್ರಸಾದ್, ಗಣೇಶ ಬಾಷ್ಕರ್, ರಾಜಾಸಿಂಗ್, ಅಮರ್ ಸಿಂಗ್, ವಿಠ್ಠಲ್ ಸಿಂಗ್, ಉದಯ ಸಿಂಗ್, ಭೀಮಸಿಂಗ್, ದಶರಥ ಸಿಂಗ್, ಮುನಿರಾಜ ಸಿಂಗ್, ಶಶಿಕಾಂತ ದೀಕ್ಷಿತ್, ಸತ್ಯನಾರಾಯಣ ಸಿಂಗ್ ತಿವಾರಿ, ನಾಗೇಂದ್ರ ಸಿಂಗ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಎಸ್ ಎಸ್ ಎಲ್‌ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.


























