
ಟೆಹ್ರಾನ್, ಅ.೩೧- ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಹೋರ್ಮುಜ್ ಜಲಸಂಧಿಯಲ್ಲಿ ೨೭ ಭಾರತೀಯ ನಾವಿಕರಿದ್ದ ತೈಲ ಸಾಗಣೆ ಹಡಗಿನ ಮೇಲೆ ಸ್ಫೋಟಕಗಳಿಂದ ದಾಳಿ ನಡೆದಿದೆ. ಪನಾಮ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಮೇಲೆ ಲಿಂಪೆಟ್ ಮೈನ್‌ಗಳನ್ನು ಬಳಸಿ (ಒಂದಕ್ಕೆ ಅಂಟಿಕೊಳ್ಳುವ ಸ್ಫೋಟಕಗಳು)ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲ ೨೭ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ.
ಸ್ಫೋಟಗಳು ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದಹಡಗನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿತು. ಇದರಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ. ಅಂತಿಮವಾಗಿ ಟ್ಯಾಂಕರ್ ತನ್ನ ಪ್ರಯಾಣವನ್ನು ಮುಂದುವರಿಸಿತು.
ಹೊರ್ಮುಜ್ ಜಲಸಂಧಿಯು ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ.
ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುವ ಈ ಮಾರ್ಗದಲ್ಲಿ ಯಾವುದೇ ರೀತಿಯ ಭದ್ರತಾ ಬಿಕ್ಕಟ್ಟು ಉಂಟಾದರೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ೨೭ ಭಾರತೀಯ ನಾವಿಕರಿದ್ದ ಟ್ಯಾಂಕರ್ ಮೇಲಿನ ದಾಳಿಯೂ ಸಮುದ್ರ ಮಾರ್ಗದ ಭದ್ರತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಲಿಂಪೆಟ್ ಮೈನ್‌ಗಳನ್ನು ಬಳಸಿ ನಡೆದ ಮೊದಲ ಯಶಸ್ವಿ ದಾಳಿ ಇದಾಗಿದೆ.

























