Home ಮುಖಪುಟ ಸುದ್ದಿ ಸಿಇಸಿ ವಿರುದ್ಧ ದೋಷಾರೋಪಣೆ ಮುಂದೂಡಿಕೆ

ಸಿಇಸಿ ವಿರುದ್ಧ ದೋಷಾರೋಪಣೆ ಮುಂದೂಡಿಕೆ

ನವದೆಹಲಿ, ಅ.೩೦- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಒಕ್ಕೂಟ ಹಮ್ಮಿಕೊಂಡಿದ್ದ ‘ಸಾರ್ವಜನಿಕ ದೋಷಾರೋಪಣೆ’ ಕಾರ್ಯಕ್ರಮವನ್ನು ಮುಂದೂಡಲಾಗಿದೆ.


ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಅಕ್ಟೋಬರ್ ೩೦ರಂದು ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಅಕ್ಟೋಬರ್ ೩೧ಕ್ಕೆ ಮುಂದೂಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.


ದೆಹಲಿಯ ೧೦, ರಾಜಾಜಿ ಮಾರ್ಗದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಆವರಣದಲ್ಲಿ ಈ ಸಾಂಕೇತಿಕ ಪ್ರತಿಭಟನೆ ಆಯೋಜಿಸಲಾಗಿತ್ತು. ಈಗ ಶನಿವಾರ ಕಾರ್ಯಕ್ರಮ ನಡೆಯಲಿದೆ.


ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜ್ಞಾನೇಶ್ ಕುಮಾರ್ ವಿರುದ್ಧದ ದೋಷಾರೋಪಣೆ ನಿರ್ಣಯವನ್ನು ಮಂಡಿಸಲಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದ ಕೊನೆಯಲ್ಲಿ ಭಾಷಣ ಮಾಡಲಿದ್ದಾರೆ.


“ಮುಖ್ಯ ಚುನಾವಣಾ ಆಯುಕ್ತರು ಸಂವಿಧಾನದ ಅಕ್ಷರ ಮತ್ತು ಆಶಯಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಚುನಾವಣಾ ಪ್ರಜಾಪ್ರಭುತ್ವದ ಮೂಲಭೂತ ಅಡಿಪಾಯವನ್ನೇ ವ್ಯವಸ್ಥಿತವಾಗಿ ದುರ್ಬಲಗೊಳಿಸಿದ್ದಾರೆ. ನೇರವಾಗಿ ಹೇಳುವುದಾದರೆ, ಅವರು ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದಾರೆ” ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದರು.


ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಸೇರಿದಂತೆ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ವಿರೋಧಿಸಿ ಇಂಡಿಯಾ ಒಕ್ಕೂಟ ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇದೀಗ ಜ್ಞಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ವೇದಿಕೆಯಲ್ಲಿ ಆರೋಪಗಳನ್ನು ಮಂಡಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.