Home ಜಿಲ್ಲೆ ಸುರಕ್ಷಿತ ಬಚಪನ್ ಅಭಿಯಾನ ಜಾಗೃತಿ ಕಾರ್ಯಕ್ರಮ

ಸುರಕ್ಷಿತ ಬಚಪನ್ ಅಭಿಯಾನ ಜಾಗೃತಿ ಕಾರ್ಯಕ್ರಮ

ಬಾದಾಮಿ,ಅ೩೧: ತಾಲ್ಲೂಕಿನ ಖ್ಯಾಡ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸುರಕ್ಷಿತ ಬಚಪನ್ ಅಭಿಯಾನ' ಜಾಗೃತಿ ಕಾರ್ಯಕ್ರಮ ಮಕ್ಕಳ ರಕ್ಷಣೆ ಹಾಗೂ ಬಾಲ್ಯವಿವಾಹ ನಿಷೇಧದ ಅರಿವು ಜಾಗೃತಿ ಕಾರ್ಯಕ್ರಮ ಜರುಗಿತು. ಚೊಳಚಗುಡ್ಡ ಗ್ರಾಮದ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಕೆ.ಬೊಂಬ್ಲೆ ಮಾತನಾಡಿ ಇಂದಿನ ಮಕ್ಕಳು ಇಂದಿನ ಪ್ರಜೆಗಳು ಮಕ್ಕಳೇ ದೇಶದ ಭವಿಷ್ಯವಾಗಿದ್ದು, ಸದೃಢ ದೇಶ ನಿರ್ಮಾಣಕ್ಕೆ ಮಕ್ಕಳ ಬಾಲ್ಯಾವಸ್ಥೆಯ ರಕ್ಷಣೆ ಮತ್ತು ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ರೀಚ್ ಸ್ವಯಂ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸುರಕ್ಷಿತ ಬಚಪನ್ ಅಭಿಯಾನ’ದ ಅಂಗವಾಗಿ ಶಾಲಾ ಮಕ್ಕಳಿಗೆ ೨೦೧೨ರ ಕಾಯ್ದೆ ಕುರಿತು ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸಂವಿಧಾನ ನೀಡಿರುವ ಹಕ್ಕುಗಳಷ್ಟೇ ಕರ್ತವ್ಯಗಳೂ ಮುಖ್ಯ. ಸಂವಿಧಾನ, ಮಹಿಳೆಯರಿಗೆ ಗೌರವ ನೀಡುವುದು ಮತ್ತು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಪ್ರಮುಖ ಕರ್ತವ್ಯವಾಗಿದೆ. ಪರಸ್ಪರ ಸಹೋದರತ್ವದ ಭಾವನೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.


ಪ್ರಜಾಪ್ರಭುತ್ವದಲ್ಲಿ ಯಾವುದೇ ವ್ಯಕ್ತಿಗಿಂತ ಕಾನೂನೇ ದೊಡ್ಡದು. ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗಾಗಿ ಇರುವ ಪ್ರಮುಖ ಕಾನೂನುಗಳಾದ ಪೋಕ್ಸೋ ಕಾಯ್ದೆ ೨೦೧೨, ಭ್ರೂಣ ಲಿಂಗ ಪತ್ತೆ ನಿಷೇಧ, ಬಾಲಕಾರ್ಮಿಕ ನಿಷೇಧ, ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು.


ಮಕ್ಕಳು ಶಾಲೆಯಲ್ಲಿ ಅಥವಾ ಹೊರಗಡೆ ನಡೆಯುವ ಪ್ರತಿಯೊಂದು ವಿಚಾರವನ್ನು ಪೋಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ಅದೇ ರೀತಿ ಪೋಷಕರೂ ಕೂಡ ಮಕ್ಕಳೊಂದಿಗೆ ದಿನಕ್ಕೆ ಕನಿಷ್ಠ ಕೆಲ ಸಮಯವನ್ನು ಮೀಸಲಿಟ್ಟು, ಅವರೊಂದಿಗೆ ಮುಕ್ತವಾಗಿ ಮಾತನಾಡಿ, ಅವರ ರಕ್ಷಣೆಗೆ ಸದಾ ಬೆನ್ನೆಲುಬಾಗಿ ನಿಲ್ಲಬೇಕೆಂದು ಕರೆ ನೀಡಿದರು.


ಖ್ಯಾಡ ಶಾಲೆಯ ಮುಖ್ಯಶಿಕ್ಷಕ ಎ.ಎಂ.ಗೌಡರ ಮಾತನಾಡಿ, ಸುರಕ್ಷಿತ ಬಚಪನ್ ಅಭಿಯಾನ'ವು ಮಕ್ಕಳಲ್ಲಿ ಅರಿವು ಹಾಗೂ ಕಾಯ್ದೆ ಬಗ್ಗೆ ಮಾಹಿತಿ ನೀಡುವ ಅಭಿಯಾನವಾಗಿದೆ. ಮಕ್ಕಳ ಸಮಸ್ಯೆಗಳಿಗೆ ೧೦೯೮ ಮಕ್ಕಳ ಸಹಾಯವಾಣಿ ಸಂಪರ್ಕ ಮಾಡಬಹುದು ಎಂದು ತಿಳಿಸಿದರು. ರೀಚ್ ಸಂಸ್ಥೆಯ ಸಂಯೋಜಕಿ ಸುಧಾ ಚಿಮ್ಮನಕಟ್ಟಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಇಂದಿನ ಮಕ್ಕಳು ಇಂದಿನ ಪ್ರಜೆಗಳು. ದೇಶದ ಅಮೂಲ್ಯ ಸಂಪತ್ತಾಗಿರುವ ಮಕ್ಕಳಿಗೆ ಸುರಕ್ಷಿತ ಬಾಲ್ಯ ಹಾಗೂ ಗೌರವಯುತ ಜೀವನ ಒದಗಿಸುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕರು ಒಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಮಕ್ಕಳು ಸೇಫ್ ಟಚ್’ (ಸುರಕ್ಷಿತ ಸ್ಪರ್ಶ) ಮತ್ತು `ಅನ್‌ಸೇಫ್ ಟಚ್’ (ಅಸುರಕ್ಷಿತ ಸ್ಪರ್ಶ) ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಯಾರಾದರೂ ಅಸಹಜವಾಗಿ ಅಥವಾ ಖಾಸಗಿ ಅಂಗಗಳನ್ನು ಮುಟ್ಟಿದಾಗ ಭಯಪಡದೆ ತಕ್ಷಣ ಧ್ವನಿ ಎತ್ತಬೇಕು. ಲೈಂಗಿಕ ದೌರ್ಜನ್ಯ ಅಥವಾ ಅನುಮಾನಾಸ್ಪದ ನಡವಳಿಕೆಗಳು ಕಂಡುಬAದಾಗ ಯಾವುದೇ ಮುಜುಗರವಿಲ್ಲದೆ ತಕ್ಷಣ ಶಿಕ್ಷಕರಿಗೆ, ಪೋಷಕರಿಗೆ ಅಥವಾ ಹಿರಿಯರಿಗೆ ತಿಳಿಸಬೇಕು, ಬಾಲ್ಯ ನಿಶ್ಚಿತಾರ್ತ, ಬಾಲ್ಯ ವಿವಾಹ, ಆಪತ್ತಿನಲ್ಲಿರುವ ಮಕ್ಕಳು ಅಥವಾ ಸಾರ್ವಜನಿಕರು ತಕ್ಷಣ ಮಕ್ಕಳ ಸಹಾಯವಾಣಿ ಸಂಖ್ಯೆ ೧೦೯೮ ಅಥವಾ ತುರ್ತು ಪೊಲೀಸ್ ಸಹಾಯವಾಣಿ ೧೧೨ ಛಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ದೌರ್ಜನ್ಯ ನಡೆದ ನಂತರ ಕಾನೂನು ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸುವುದು ಮುಖ್ಯವಾಗಿದ್ದು, ರೀಚ್ ಸಂಸ್ಥೆ ಹಾಗೂ ಜಿಲ್ಲಾಡಳಿತವು ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಮೂಲಕ ಬಾಲ್ಯ ವಿವಾಹ ನಿಷೇಧಿಸಲು ಪ್ರಯತ್ನದಲ್ಲಿದೆ. ಮಕ್ಕಳು ತಮ್ಮ ಹಕ್ಕುಗಳು ಮತ್ತು ಸುರಕ್ಷತೆಯ ಬಗ್ಗೆ ಸದಾ ಜಾಗೃತರಾಗಿರಬೇಕು. ಮುಖ್ಯವಾಗಿ ಮಕ್ಕಳು ಹಿರಿಯರನ್ನು ಗೌರವಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ರಾಜು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.