Home Lead News ಹೆಲಿಕಾಪ್ಟರ್​ ಪತನ; ಸಿಸಿಬಿ ಇನ್ಸ್​ಪೆಕ್ಟರ್​ ಸೇರಿ ಕರ್ನಾಟಕ ಮೂಲದ ಐವರು, ಪೈಲಟ್​​ ಸಾವು

ಹೆಲಿಕಾಪ್ಟರ್​ ಪತನ; ಸಿಸಿಬಿ ಇನ್ಸ್​ಪೆಕ್ಟರ್​ ಸೇರಿ ಕರ್ನಾಟಕ ಮೂಲದ ಐವರು, ಪೈಲಟ್​​ ಸಾವು

ಚಮೋಲಿ (ಉತ್ತರಾಖಂಡ),ಅ.30-ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಸೇರಿದಂತೆ ಕರ್ನಾಟಕ ಮೂಲದ ಐವರು ಪ್ರಯಾಣಿಕರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಶುಕ್ರವಾರ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಚಮೋಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಸಿಂಗ್ ಪನ್ವಾರ್ ದೃಢಪಡಿಸಿದ್ದಾರೆ.


ಬದರಿನಾಥ ಧಾಮದಿಂದ ಡೆಹ್ರಾಡೂನ್‌ಗೆ ಹಿಂದಿರುಗುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಖಾಸಗಿ ಹೆಲಿಕಾಪ್ಟರ್ ಜೋಶಿಮಠದ ಮಾರ್ವಾರಿ ಸೇತುವೆ ಸಮೀಪದ ಜೆಪಿ ಪವರ್ ಹೌಸ್ ಬಳಿ ಗುಡ್ಡಕ್ಕೆ ಅಪ್ಪಳಿಸಿ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಇದ್ದರು.


ದೆಹಲಿ ಮೂಲದ ಪೈಲಟ್ ಕ್ಯಾಪ್ಟನ್ ಹಿಮಾಂಶು ಸಭರ್ವಾಲ್ (48), ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ (44), ವಕೀಲರಾದ ಸುಧೀರ್ ಕೆ. (50), ಶಂಕರ್ ಗೌಡ (39), ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎನ್ನಲಾದ ಹೆಚ್.ಎಸ್. ನಟರಾಜ್ (51) ಹಾಗೂ ಗುತ್ತಿಗೆದಾರ ಪ್ರತಾಪ್ ಗೌಡ (41) ಎಂದು ಗುರುತಿಸಲಾಗಿದೆ.


ಸಿಸಿಬಿ ಪಿಐ ಸಾಲುಂಕೆ ಸಾವು:
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಅರುಣ್ ಸಾಲುಂಕೆ ಅವರು 2007ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದರು. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ವಾಸವಾಗಿದ್ದ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇಂದಿರಾನಗರ, ಬಾಣಸವಾಡಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ತಿಂಗಳುಗಳಿಂದ ಸಿಸಿಬಿಯ ವಿಶೇಷ ವಿಚಾರಣಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಬಾಣಸವಾಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಅವಧಿಯಲ್ಲಿ ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆ ಆಧರಿಸಿ ಬೆಂಗಳೂರು ಪೊಲೀಸರ ಲೋಕಸ್ಪಂದನ ಪ್ರಕ್ರಿಯೆಯಡಿ ಠಾಣೆಗೆ ಅತ್ಯುತ್ತಮ ಪೊಲೀಸ್ ಠಾಣೆ ಎಂಬ ಗೌರವ ಲಭಿಸಿತ್ತು. ಬೆಳಗಾವಿ ಮೂಲದ ಅರುಣ್ ಅವರು ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು.


ಗುಡ್ಡಕ್ಕೆ ಅಪ್ಪಳಿಸಿ ಪತನ:
ಜೋಶಿಮಠದ ಚಾಯಿ ಗ್ರಾಮದ ಸಮೀಪ, ಹಾಥಿ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ಸೇನೆ, ಚಮೋಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಎಸ್‌ಡಿಆರ್‌ಎಫ್ ಹಾಗೂ ಐಟಿಬಿಪಿ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದರು.


ಈ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಘಟನೆಯ ಬಗ್ಗೆ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದರು. ಗಾಯಾಳುಗಳನ್ನು ತಕ್ಷಣವೇ ಉತ್ತಮ ಚಿಕಿತ್ಸೆಗಾಗಿ ಸ್ಥಳಾಂತರಿಸಲು ಸೂಚನೆ ನೀಡಿರುವುದಾಗಿ ಹೇಳಿದ್ದರು.


ಕಾರ್ಯಾಚರಣೆ ಬಗ್ಗೆ ತನಿಖೆ:
ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನ ಮಾಲೀಕತ್ವ, ಗುತ್ತಿಗೆ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹಲವು ಸಂಸ್ಥೆಗಳ ಹೆಸರು ಕೇಳಿಬಂದಿದೆ. ಯುಸಿಎಡಿಎ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್ ಮೂಲತಃ ಸ್ಕೈ ಪಲ್ಸ್ ಸಂಸ್ಥೆಗೆ ಸೇರಿದ್ದು, ಚಾರ್ಟರ್ ವಿಮಾನ ಸೇವೆಗಾಗಿ ಶಿವ ಭೋಲೆ ಟ್ರಾವೆಲ್ ಮಾರ್ಟ್‌ಗೆ ಗುತ್ತಿಗೆ ನೀಡಲಾಗಿತ್ತು.


ಶಿವ ಭೋಲೆ ಟ್ರಾವೆಲ್ ಮಾರ್ಟ್ ಸ್ವಂತ ಪರವಾನಗಿ ಹೊಂದಿರಲಿಲ್ಲ ಎನ್ನಲಾಗಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ (ಟಿಜಿಸಿಎ) ನಾನ್‌-ಶೆಡ್ಯೂಲ್ಡ್ ಆಪರೇಟರ್ ಪರ್ಮಿಟ್ (ಎನ್ ಎಸ್ ಒಪಿ) ಪಡೆಯುವ ಪ್ರಕ್ರಿಯೆಯಲ್ಲಿತ್ತು. ಈ ನಡುವೆ ಮತ್ತೊಂದು ಸಂಸ್ಥೆಯ ಪರವಾನಗಿ ಬಳಸಿ ತಾತ್ಕಾಲಿಕವಾಗಿ ವಿಮಾನ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.