
ನವದೆಹಲಿ,ಅ.೩೧- ದೆಹಲಿಯ ಮಂಗೋಲ್ಪುರಿ ಕೈಗಾರಿಕಾ ಪ್ರದೇಶದ ಹಂತ-೧ರಲ್ಲಿರುವ ಶೂ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ನಾಲ್ವರು ಸಜೀವವಾಗಿ ದಹನಗೊಂಡಿದ್ದಾರೆ. ರಾತ್ರಿ ಸುಮಾರು ೯:೩೦ ರ ವೇಳೆಗೆ ಕಾರ್ಖಾನೆಯ ನೆಲಮಾಳಿಗೆಯಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿತು. ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರು ಜನರನ್ನು ತಕ್ಷಣವೇ ಹೊರತೆಗೆದು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೆ ನಾಲ್ವರು ಮೃತಪಟ್ಟಿದ್ದು, ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇದೇ ವೇಳೆ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಮತ್ತೈದು ಜನರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ದೆಹಲಿ ಅಗ್ನಿಶಾಮಕ ಸೇವೆಯ ಸಹಾಯಕ ವಿಭಾಗೀಯ ಅಧಿಕಾರಿ (ಎಡಿಒ) ಪರಸ್ ಕುಮಾರ್ ಅವರು, ಪಾದರಕ್ಷೆ ತಯಾರಿಕೆ ಮತ್ತು ಸಂಗ್ರಹಣಾ ಘಟಕದ ನೆಲಮಾಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಪ್ರಸ್ತುತ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ತಂಪಾಗಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಹಾಗೂ ಕಟ್ಟಡದೊಳಗೆ ಯಾರೂ ಸಿಲುಕಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವಘಡಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ, ಗುತ್ತಿಗೆದಾರ ಮತ್ತು ಉದ್ಯೋಗಿಗಳನ್ನು ತನಿಖೆಗಾಗಿ ವಿಚಾರಣೆಗೆ ಒಳಪಡಿಸಲಾಗಿದೆ.

























